ಸುದ್ದಿ ಪೋರ್ಟಲ್

Deamweb News

ತಾಜಾ ಸುದ್ದಿ
ಇತ್ತೀಚಿನ ಸುದ್ದಿಗಳನ್ನು ಲೋಡ್ ಮಾಡಲಾಗುತ್ತಿದೆ...

ಮುಖಪುಟ / ಸುದ್ದಿ ವಿವರ

ಬೆಂಗಳೂರು : ಬದುಕು ಮುಗಿಸಿದ ರೀಲ್ಸ್..ಪ್ರೀತಿ ಮಾಡಿ ಮದುವೆಯಾಗಿ ಕೊನೆಗೆ ಕೊಲೆ ಮಾಡಿ ತಾನು ನೇಣಿಗೆ ಶರಣಾದ ಗಂಡ




ಬೆಂಗಳೂರು : ಅನುಮಾನ ಅನ್ನೋದು ಕಣ್ಣಿಗೆ ಕಾಣದ ವಿಷವಿದ್ದಂತೆ. ಒಮ್ಮೆ ಅದು ಮನಸ್ಸಿಗೆ ಹೊಕ್ಕಿತೆಂದರೆ ಸಾಕು, ವರ್ಷಗಳ ನಂಬಿಕೆ, ಪ್ರೀತಿಯ ಬಂಧ ಎಲ್ಲವೂ ಕ್ಷಣಾರ್ಧದಲ್ಲಿ ನುಚ್ಚುನೂರಾಗಿ ಹೋಗುತ್ತದೆ. ಇಂದು ಸಾಮಾಜಿಕ ಜಾಲತಾಣಗಳು ನಮ್ಮ ಬದುಕನ್ನು ಎಷ್ಟು ಆವರಿಸಿಕೊಂಡಿವೆ ಎಂದರೆ, ಅದೇ ಸ್ಕ್ರೀನ್ ಹಿಂದೆ ಸುಂದರ ಸಂಸಾರಗಳು ಒಡೆದು ಹೋಗುತ್ತಿವೆ. ಅಂಥದ್ದೇ ಒಂದು ದುರಂತ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಶಾಲಾ ದಿನಗಳ ಪ್ರೀತಿ, ಸಂಸಾರದ ಸಿಹಿ

ಬೆಂಗಳೂರಿನ ಹೆಚ್‌ಎಎಲ್ ಸಮೀಪದ ವಿಭೂತಿಪುರದಲ್ಲಿ ನೆಲೆಸಿದ್ದ ರಾಘವೇಂದ್ರ ಮತ್ತು ಶೃತಿ ಅವರದ್ದು ಶಾಲಾ ದಿನಗಳಿಂದಲೇ ಬೆಳೆದ ಒಡನಾಟ. ಕಾಲೇಜು ದಿನಗಳಲ್ಲಿ ಪ್ರೀತಿಯಾಗಿ ಅರಳಿ, ಕೊನೆಗೆ ಇಬ್ಬರೂ ಕುಟುಂಬದವರ ಒಪ್ಪಿಗೆಯೊಂದಿಗೆ ಮದುವೆಯಾಗಿದ್ದರು. ರಾಘವೇಂದ್ರ ಆಟೋ ಓಡಿಸುತ್ತಾ ಕುಟುಂಬ ಸಾಕುತ್ತಿದ್ದರೆ, ಶೃತಿ ಕಚೇರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ದಾಂಪತ್ಯದ ಕುರುಹಾಗಿ ಇಬ್ಬರು ಮುದ್ದಾದ ಮಕ್ಕಳೂ ಇದ್ದರು. ಬಿಡುವಿನ ವೇಳೆಯಲ್ಲಿ ಇಬ್ಬರೂ ಜೊತೆಯಾಗಿ ರೀಲ್ಸ್ ಮಾಡುತ್ತಾ ಖುಷಿಯಾಗಿಯೇ ಬದುಕುತ್ತಿದ್ದರು.

ಬದಲಾದ ದಿನಚರಿ, ಹೆಮ್ಮರವಾದ ಸಂಶಯ

ಆದರೆ, ಇತ್ತೀಚಿನ ದಿನಗಳಲ್ಲಿ ಶೃತಿಗೆ ರೀಲ್ಸ್ ಹಾಗೂ ಮೊಬೈಲ್ ಮೇಲಿನ ವ್ಯಾಮೋಹ ಮಿತಿಮೀರಿತ್ತು ಎನ್ನಲಾಗಿದೆ. ಸದಾ ಮೊಬೈಲ್‌ನಲ್ಲಿ ಮುಳುಗಿರುತ್ತಿದ್ದ ಪತ್ನಿಯ ನಡವಳಿಕೆ ರಾಘವೇಂದ್ರನಲ್ಲಿ ಅನುಮಾನದ ಕಿಡಿಯನ್ನು ಹೊತ್ತಿಸಿತ್ತು. "ಯಾವಾಗಲೂ ಫೋನ್‌ನಲ್ಲೇ ಇರಬೇಡ" ಎಂದು ಪದೇಪದೇ ಎಚ್ಚರಿಸಿದರೂ ಇಬ್ಬರ ನಡುವಿನ ಮನಸ್ತಾಪ ಶಮನವಾಗಿರಲಿಲ್ಲ. ಸಂಶಯದ ವಿಕೃತಿ ಎಷ್ಟರಮಟ್ಟಿಗೆ ತಲುಪಿತ್ತೆಂದರೆ, ಕೆಲವು ದಿನಗಳ ಹಿಂದಷ್ಟೇ ಕೋಪದಲ್ಲಿ ಪತ್ನಿಯ ಜಡೆಯನ್ನೇ ಕತ್ತರಿಸಿ ಆಕ್ರೋಶ ಹೊರಹಾಕಿದ್ದ. ಆದರೂ ಇಬ್ಬರ ನಡುವಿನ ಕಂದಕ ಮುಚ್ಚಿರಲಿಲ್ಲ.

ಒಂದೇ ರಾತ್ರಿಯಲ್ಲಿ ಮುಗಿದುಹೋದ ಬದುಕು

ನಿನ್ನೆಯೂ ಇದೇ ರೀಲ್ಸ್ ಹಾಗೂ ಮೊಬೈಲ್ ವಿಚಾರಕ್ಕೆ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಜಗಳ ವಿಕೋಪಕ್ಕೆ ಹೋದಾಗ ರಾಘವೇಂದ್ರ, ಶೃತಿಯ ಗೆಳತಿಗೆ ಕರೆ ಮಾಡಿ "ನನ್ನ ಹೆಂಡತಿಯನ್ನು ಕೊಂದು ನಾನೂ ಸಾಯುತ್ತೇನೆ" ಎಂದು ಆಕ್ರೋಶದಿಂದ ಹೇಳಿದ್ದಾನೆ. ಆ ದುಡುಕಿನ ಆವೇಶದಲ್ಲೇ ಬಿಯರ್ ಬಾಟಲ್‌ನಿಂದ ಪತ್ನಿಯ ಕುತ್ತಿಗೆ ಮತ್ತು ಎದೆ ಭಾಗಕ್ಕೆ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ. ನಂತರ ತಾನೂ ನೇಣಿಗೆ ಶರಣಾಗಿದ್ದಾನೆ.ಬೆಳಗ್ಗೆ ಮನೆಗೆ ಬಂದ ರಾಘವೇಂದ್ರನ ತಂದೆ, ಬಾಗಿಲು ತೆರೆದಿರುವುದನ್ನು ಕಂಡು ಒಳಹೋದಾಗ ಇಬ್ಬರೂ ಶವವಾಗಿ ಬಿದ್ದಿರುವುದು ಬೆಳಕಿಗೆ ಬಂದಿದೆ. ಮಾಹಿತಿ ತಿಳಿದ ವೈಟ್‌ಫೀಲ್ಡ್ ಡಿಸಿಪಿ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅನಾಥವಾದ ಮುಗ್ಧ ಜೀವಗಳು

ಪ್ರೀತಿಸಿ ಒಂದಾದ ಜೋಡಿಯ ಬದುಕು ಒಂದೇ ರಾತ್ರಿಯಲ್ಲಿ ಅಂತ್ಯವಾಗಿದೆ. ಇಬ್ಬರ ನಡುವಿನ ಅನುಮಾನ, ಕ್ಷಣಿಕ ಆಕ್ರೋಶ ಮತ್ತು ಸೋಶಿಯಲ್ ಮೀಡಿಯಾದ ಅತಿಯಾದ ಹುಚ್ಚಿಗೆ ಇಂದು ಇಬ್ಬರು ಮುಗ್ಧ ಮಕ್ಕಳು ತಂದೆ-ತಾಯಿಯ ಪ್ರೀತಿಯಿಂದ ವಂಚಿತರಾಗಿ ಅನಾಥರಾಗಿ ನಿಂತಿದ್ದಾರೆ.ತಂತ್ರಜ್ಞಾನ ಮತ್ತು ಸೋಶಿಯಲ್ ಮೀಡಿಯಾ ನಮ್ಮ ಸಂವಹನಕ್ಕೆ ಇರಬೇಕೇ ಹೊರತು, ಸುಂದರ ಸಂಸಾರಗಳನ್ನು ಬಲಿ ತೆಗೆದುಕೊಳ್ಳುವಂತಾಗಬಾರದು. ಅನುಮಾನ ಮತ್ತು ಹಠಮಾರಿತನಕ್ಕೆ ಯಾವುದೇ ಪರಿಹಾರ ಸಿಗುವುದಿಲ್ಲ ಎಂಬುದಕ್ಕೆ ಈ ಘಟನೆಯೇ ಕರಾಳ ಸಾಕ್ಷಿ.


# 

Nandheesh kumar ac
Deamweb News ಪೋರ್ಟಲ್‌ನ ಸಂಪಾದಕೀಯ ಮಂಡಳಿ. ನಿಖರ, ನಿಷ್ಪಕ್ಷಪಾತ ಹಾಗೂ ಕ್ಷಣಕ್ಷಣದ ತಾಜಾ ಸುದ್ದಿಗಳನ್ನು ಒದಗಿಸುವುದು ನಮ್ಮ ಗುರಿ.

ನಿಮ್ಮ ಅಭಿಪ್ರಾಯ ತಿಳಿಸಿ