ನಂದೀಶ್ ಭದ್ರಾವತಿ, ಶಿವಮೊಗ್ಗ
ಅಲ್ಲಿ ಭಕ್ತಿ ಪರಾಕಷ್ಠೆ ಮೆರದಿತ್ತು...ಪತಿ-ಪತ್ನಿ ಇಬ್ಬರು ಸಾಂಪ್ರಾದಾಯಿಕ ಉಡುಪಿನಲ್ಲಿ ಕುಳಿತಿದ್ದರು..ಇನ್ನೊಂದೆಡೆ ಶ್ರೀ ಕೃಷ್ಣನಿಗೆ ಅಭಿಷೇಕ ನಡೆಯುತ್ತಿತ್ತು. ಇವೆಲ್ಲವುದರ ನಡುವೆ ಮಂತ್ರ ಘೋಷ.
ಹೌದು.ನಗರದ ನ್ಯೂಟೌನ್ ನಲ್ಲಿರುವ ದತ್ತಾಶ್ರಮದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಅನಘಾ ದತ್ತ ವೃತ್ತದ ನಿಮಿತ್ತ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಈ ದೃಶ್ಯಗಳು ಕಂಡು ಬಂದವು.
ವೇ ದವ್ಯಾಸ ಮಹರ್ಷಿಗಳಿಂದ ರಚಿತವಾದ ದತ್ತ ಪುರಾಣದಲ್ಲಿ ಈ ವ್ರತದ ಮಹತ್ವವನ್ನು ವಿವರಿಸಲಾಗಿದೆ. ಸ್ವತಃ ದತ್ತಾತ್ರೇಯ ಸ್ವಾಮಿಯೇ ಕಾರ್ತವೀರ್ಯಾರ್ಜುನನಿಗೆ ಈ ವ್ರತದ ದೀಕ್ಷೆ ನೀಡಿದ್ದರು. ಇದಲ್ಲದೆ ತ್ರೇತಾಯುಗದಲ್ಲಿ ರಾಜ ದಶರಥ ಹಾಗೂ ಶ್ರೀರಾಮಚಂದ್ರರು, ಮತ್ತು ದ್ವಾಪರಾಯುಗದಲ್ಲಿ ಶ್ರೀಕೃಷ್ಣನ ಮಾರ್ಗದರ್ಶನದಂತೆ ಧರ್ಮರಾಜನು ಈ ವ್ರತವನ್ನು ಆಚರಿಸಿದ್ದರು ಎಂದು ಪುರಾಣಗಳು ಹೇಳುವ ಹಿನ್ನೆಲೆ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಆಧುನಿಕ ಪುನರುತ್ಥಾನ
ಮೈಸೂರಿನ ಅವಧೂತ ದತ್ತ ಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಗಳು ಈ ವ್ರತವನ್ನು ಸಾರ್ವಜನಿಕವಾಗಿ ಅತ್ಯಂತ ಸರಳ ರೂಪದಲ್ಲಿ ಎಲ್ಲರೂ ಆಚರಿಸುವಂತೆ ಪ್ರಚಲಿತಕ್ಕೆ ತಂದರು. [
ವ್ರತವನ್ನು ಯಾವಾಗ ಆಚರಿಸಬೇಕು?
ಈ ವ್ರತವನ್ನು ವರ್ಷದ ಯಾವುದೇ ದಿನದಲ್ಲೂ ಆಚರಿಸಬಹುದು.ಆದರೆ, ಮಾರ್ಗಶಿರ ಮಾಸದ ಕೃಷ್ಣ ಪಕ್ಷದ ಅಷ್ಟಮಿ (ಅನಘಾಷ್ಟಮಿ) ದಿನದಂದು ಈ ವ್ರತವನ್ನು ಮಾಡುವುದು ಅತ್ಯಂತ ಶ್ರೇಷ್ಠ ಹಾಗೂ ವಿಶೇಷ ಫಲದಾಯಕ
ಪೂಜಾ ವಿಧಾನ
ಅನಘಾ ಯಂತ್ರ: ಪೂಜೆಯ ಸ್ಥಳದಲ್ಲಿ ಅನಘಾ ದತ್ತ ಪೂಜಾ ಯಂತ್ರ ಅಥವಾ ಮಂಡಲವನ್ನು ಬರೆದು, ಅದರ ಮೇಲೆ ಅಡಿಕೆ ಅಥವಾ ವಿಗ್ರಹಗಳನ್ನು ಇಟ್ಟು ದತ್ತಾತ್ರೇಯ ಮತ್ತು ಅನಘಾ ದೇವಿಯನ್ನು ಆವಾಹನೆ ಮಾಡಲಾಗುತ್ತದೆ.
ಅಷ್ಟ ಸಿದ್ಧಿಗಳ ಪೂಜೆ
ದತ್ತಾತ್ರೇಯ ಮತ್ತು ಅನಘಾ ದೇವಿಯ ಜೊತೆಗೆ ಅವರ ಎಂಟು ಜನ ಪುತ್ರರಾದ ಅಷ್ಟ ಸಿದ್ಧಿಗಳನ್ನು (ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಾಮ್ಯ, ಈಶಿತ್ವ, ವಶಿತ್ವ) ಈ ವ್ರತದಲ್ಲಿ ಪೂಜಿಸಲಾಗುತ್ತದೆ. ಭಕ್ತರು ಮಗೆ ಸಾಧ್ಯವಿರುವ ರೀತಿಯಲ್ಲಿ ಹಳದಿ, ಕುಂಕುಮ, ಅಕ್ಷತೆ ಹಾಗೂ ನೈವೇದ್ಯಗಳನ್ನು ಅರ್ಪಿಸಿ ಸರಳವಾಗಿ ಮನೆಯಲ್ಲೇ ಈ ಪೂಜೆಯನ್ನು ಮಾಡಬಹುದು.
ವ್ರತದ ಪ್ರಯೋಜನಗಳು
ಪಾಪ ನಾಶ: ತಿಳಿದೋ ತಿಳಿಯದೆಯೋ ಮಾಡಿದ ಕಾಯಕ, ವಾಚಿಕ ಮತ್ತು ಮಾನಸಿಕ ಪಾಪಗಳು ದೂರವಾಗುತ್ತವೆ. ಸಂಸಾರದ ಕಷ್ಟಗಳು ನಿವಾರಣೆಯಾಗಿ, ಮನೆಯಲ್ಲಿ ಶಾಂತಿ, ಸುಖ, ಸಂಪತ್ತು ಮತ್ತು ದೈಹಿಕ ಶಕ್ತಿ ವೃದ್ಧಿಯಾಗುತ್ತದೆ. ಅಲ್ಲದೇ ಬುದ್ಧಿಶಕ್ತಿ, ಉತ್ತಮ ಜ್ಞಾಪಕ ಶಕ್ತಿ ಮತ್ತು ಆಧ್ಯಾತ್ಮಿಕ ಜ್ಞಾನ ಸಿದ್ಧಿಸುತ್ತದೆ. ಒಟ್ಟಾರೆ ಅನಘಾ ದೇವಿ ವೃತ ಕೈಗೊಂಡ ದಂಪತಿಗಳು ಭಕ್ತಿಯಿಂದ ಪೂಜೆ ಕೈಗೊಂಡರು.
.....
ಅನಘಾ ದತ್ತ ವೃತ ಎಂದರೇನು?
ಅನಘ' ಎಂದರೆ ಯಾವುದೇ ಪಾಪಗಳಿಲ್ಲದ, ಪರಿಶುದ್ಧವಾದ ರೂಪ ಎಂದರ್ಥ. ಈ ವ್ರತವನ್ನು ಆಚರಿಸುವುದರಿಂದ ಕಷ್ಟಗಳು ನಿವಾರಣೆಯಾಗಿ, ಸುಖ, ಶಾಂತಿ ಮತ್ತು ಸಮೃದ್ಧಿ ದೊರೆಯುತ್ತದೆ ಎಂಬ ನಂಬಿಕೆಯಿದೆ.
...
ಅಪ್ಪನಿಂದ ಉಚಿತ ಪಂಚೆ, ಸೀರೆ ಹಂಚಿಕೆ
ಅನಘಾ ದತ್ತ ವೃತದ ನಿಮಿತ್ತ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀಕಾಂತ ಅಪ್ಪ ದಂಪತಿಗಳಿಗೆ ಉಚಿತ ಪಂಚೆ, ಸೀರೆ ಹಂಚಿಕೆ ಮಾಡಿದರು.
...
ತಳಿರು ತೋರಣಗಳಿಂದ ಕಂಗೊಳಿಸಿದ ದತ್ತಾಶ್ರಮ
ಶ್ರೀ ಕೃಷ್ಣಾ ಜನ್ಮಾಷ್ಟಮಿ ನಿಮಿತ್ತ ಇಡೀ ಆಶ್ರಮವನ್ನು ತಳಿರು ತೋರಣಗಳಿಂದ ಕಂಗೊಳಿಸಲಾಗಿತ್ತು. ಈ ದೇಗುಲಕ್ಕೆ ಬಂದ ವೇಳೆ ಮನಸ್ಸಿಗೆ ಆನಂದವಾಗುತ್ತಿತ್ತು.
...
ನೂರಕ್ಕೂ ಹೆಚ್ಚು ದಂಪತಿಗಳು ಪೂಜೆಯಲ್ಲಿ ಭಾಗಿ
ಅನಘಾ ದತ್ತ ವೃತದ ನಿಮಿತ್ತ ನೂರಕ್ಕೂ ಹೆಚ್ವು ದಂಪತಿಗಳು ಪೂಜೆಯಲ್ಲಿ ಭಾಗವಹಿಸಿದ್ದರು. ಚಿತ್ರದುರ್ಗ, ದಾವಣಗೆರೆ, ಗದಗ ಸೇರಿದಂತೆ ನಾನಾ ಕಡೆಯಿಂದ ಭಕ್ತಾದಿಗಳು ಆಗಮಿಸಿದ್ದರು.
...
ಯಾರು ಈ ಅನಘಾ ದೇವಿ?
ದತ್ತಾತ್ರೇಯ ಸ್ವಾಮಿಯ ಯೋಗದ ಶಕ್ತಿಯಿಂದ ಅವತಾರವೆತ್ತಿದವಳು ಅನಘಾ ದೇವಿ. ಬಹಳ ಸುಂದರಿ. ಹೊಳೆಯುವ ಮುಖಕಾಂತಿಯ ಈಕೆ ದತ್ತಾತ್ರೇಯ ಸ್ವಾಮಿಯ ಹಲವಾರು ಅವತಾರಗಳಲ್ಲಿ ಒಬ್ಬಾಕೆ. ಕಮಲದ ಹೂವಿನಲ್ಲಿ ಕೂರವ ಈಕೆ, ಕಾಲಿಗೆ ತುಂಬು ಗೆಜ್ಜೆ ಧರಿಸಿರುತ್ತಾಳೆ. ಒಂದು ಕೈಲಿ ತಾವರೆಯನ್ನು ಹಿಡಿದಿದ್ದರೆ ಮತ್ತೊಂದು ಕೈಯ್ಯನ್ನು ರಕ್ಷಣೆಯ ಭರವಸೆ ನೀಡುವಂತೆ ಇಟ್ಟುಕೊಂಡಿರುತ್ತಾಳೆ. ಆಕೆಯ ಅರ್ಧ ನಿಮೀಲಿತ ಕಣ್ಗಳು ಯೋಗಧ್ಯಾನದಲ್ಲಿರುವುದನ್ನು ಸೂಚಿಸುತ್ತವೆ.
...
ಕಥೆ ಏನು ಹೇಳುತ್ತದೆ
ದತ್ತಾತ್ರೇಯ ಸ್ವಾಮಿಗೆ 5 ವರ್ಷಗಳಿದ್ದಾಗ ಕೊಳವೊಂದರಲ್ಲಿ ಅವರು ಕಳೆದು ಹೋಗುತ್ತಾರೆ. ಬಹಳಷ್ಟು ತಪಸ್ವಿಗಳು ಹಾಗೂ ಶಿಷ್ಯರು ಅವರು ಹಿಂದಿರುಗುತ್ತಾರೆಂದು ಕೊಳದ ಬಳಿಯೇ ಕಾಯುತ್ತಿರುತ್ತಾರೆ. ಸುಮಾರು 100 ವರ್ಷಗಳ ಬಳಿಕ ಸಮಾಧಿ ಸ್ಥಿತಿಯಿಂದ ಹೊರಬರುವ ದತ್ತಾತ್ರೇಯರು ತಮಗಾಗಿ ಕಾಯುತ್ತಿದ್ದ ಶಿಷ್ಯರನ್ನು ಪರೀಕ್ಷಿಸ ಬಯಸುತ್ತಾರೆ. ಹೀಗಾಗಿ, ಯೋಗದ ಶಕ್ತಿ ಬಳಸಿ ಚೆಂದದ ಹೆಣ್ಣಿನ ಸ್ವರೂಪ ತಾಳುತ್ತಾರೆ.
ನಂತರ ಕೈಲಿ ಅಮೃತ ಕುಡಿಯುತ್ತಾ, ನೃತ್ಯ ಮಾಡತೊಡಗುತ್ತಾರೆ. ಈಕೆಯನ್ನು ನೋಡಿದವರಲ್ಲಿ ಕೆಲವರು ಕೈಲಿ ಮಧು ಹಿಡಿದ ಈಕೆ ಮಧುಮತಿ ಎಂದರೆ, ನದಿಯಂತೆ ಕುಣಿಯುವ ಈಕೆ ನದಿಯೇ ಇರಬೇಕು ಎನ್ನುತ್ತಾರೆ. ಆದರೆ, ಕೆಲವರಿಗೆ ಮಾತ್ರ ಆಕೆ ದತ್ತಾತ್ರೇಯ ಸ್ವಾಮಿಯ ಹೆಣ್ಣಿನ ರೂಪ ಎಂಬುದು ಅರಿವಾಗಿ ಆಕೆಯನ್ನು ಪೂಜಿಸತೊಡಗುತ್ತಾರೆ. ಎಲ್ಲರ ಅಭಿಪ್ರಾಯ ಕೇಳಿದ ಮೇಲೆ ದತ್ತಾತ್ರೇಯರು ಕೊಳದಿಂದ ಹೊರ ಬಂದು ತಮ್ಮ ತಪೋಶಕ್ತಿಯಿಂದ ಹುಟ್ಟಿದ ಹೆಣ್ಣನ್ನು ಅನಘಾ ಎಂದು ಹೆಸರಿಸುತ್ತಾರೆ. ಅನಘಾ ಎಂದರೆ ಪಾಪವೇ ಮಾಡದವಳು ಎಂದರ್ಥ.ಯಾರೆಲ್ಲ ಆಕೆಯ ರೂಪವನ್ನು ಗುರುತಿಸುತ್ತಾರೋ ಅವರಿಗೆ ಸುಖ, ಸಮೃದ್ಧಿ ಹಾಗೂ ಶಾಂತಿ ದೊರಕುತ್ತದೆ. ಅವರೆಲ್ಲ ದುಃಖಗಳು ಮರೆಯಾಗುತ್ತವೆ. ಅನಘ ದೇವನಿಗೂ, ಅನಘ ದೇವಿಗೂ ವ್ಯತ್ಯಾಸವಿಲ್ಲ, ಅವರಿಬ್ಬರೂ ಒಂದೇ ಎಂದು ಅರಿತವರಿಗೆ ಕೂಡಾ ದೇವರ ಕೃಪಾಶೀರ್ವಾದ ದೊರಕುತ್ತದೆ. ಈ ಲೀಲೆಯ ಹಿಂದಿನ ಕಾರಣವೇ ದೇವರಲ್ಲಿ ಗಂಡು, ಹೆಣ್ಣೆಂಬ ಬೇಧವಿಲ್ಲ ಎಂದು ಭಕ್ತರಿಗೆ ಅರ್ಥ ಮಾಡಿಸುವುದು. ದೇವರು ಯಾವ ರೂಪದಲ್ಲಿಯೂ ಇರಬಹುದು ಅಥವಾ ರೂಪವೇ ಇಲ್ಲದಿರಬಹುದು.










ನಿಮ್ಮ ಅಭಿಪ್ರಾಯ ತಿಳಿಸಿ