ಸುದ್ದಿ ಪೋರ್ಟಲ್

Deamweb News

ತಾಜಾ ಸುದ್ದಿ
ಇತ್ತೀಚಿನ ಸುದ್ದಿಗಳನ್ನು ಲೋಡ್ ಮಾಡಲಾಗುತ್ತಿದೆ...

ಮುಖಪುಟ / ಸುದ್ದಿ ವಿವರ

ದಾವಣಗೆರೆ; ಟೀಮ್ ಅಕಾಡೆಮಿಯಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ...ಕಾರಣ ನಿಗೂಢ, ಈ ಕಾಲೇಜಿಗೆ ಸೇರಿಸಬೇಕೆಂದರೆ ಎಚ್ಚರ

 



ದಾವಣಗೆರೆ : ನೋಡೋದಕ್ಕೆ ಅಚ್ಚುಕಟ್ಟಾಗಿ ತಿದ್ದಿ ತೀಡಿದ ಗೊಂಬೆಯಂತಿದ್ದ ಮುದ್ದು ಮುಖ. ಓದಿನಲ್ಲೂ ಸದಾ ಮುಂದು.. ಈಗಷ್ಟೇ ಸೆಕೆಂಡ್‌ ಪಿಯುಸಿಗೆ ಕಾಲಿಟ್ಟು, ಕಣ್ಣ ತುಂಬಾ ಹತ್ತಾರು ಕನಸುಗಳನ್ನು ಹೊತ್ತು ಹೆಜ್ಜೆ ಇಡುತ್ತಿದ್ದ ಆ ಕರುಳ ಕುಡಿ ಇಂದು ಹೆತ್ತವರನ್ನು ಅನಾಥವಾಗಿಸಿ ಹೊರಟುಹೋಗಿದ್ದಾಳೆ. ನಾಲ್ಕು ದಿನಗಳ ಹಿಂದಷ್ಟೇ ನೂತನ ಮನೆಯ ಗೃಹಪ್ರವೇಶದಲ್ಲಿ ನಗುನಗುತ್ತಾ ಎಲ್ಲರ ಕಣ್ಮಣಿಯಾಗಿದ್ದವಳು, ಇಂದು ಶವವಾಗಿ ಮಲಗಿದ್ದಾಳೆ.ದಾವಣಗೆರೆಯ ಪ್ರತಿಷ್ಠಿತ ಟೀಮ್‌ ಅಕಾಡೆಮಿ ಹಾಸ್ಟೆಲ್‌ನಲ್ಲಿ ನಡೆದ ಈ ದುರಂತ ಈಗ ಇಡೀ ನಾಡನ್ನೇ ಬೆಚ್ಚಿಬೀಳಿಸಿದೆ.

ಸಂಭ್ರಮದ ಮನೆಯಲ್ಲಿ ದಿಢೀರ್ ಸೂತಕ!

ವಿಜಯನಗರ (ಹೂವಿನಹಡಗಲಿ) ಜಿಲ್ಲೆಯ ಕುರವತ್ತಿ ಗ್ರಾಮದ ನಿಂಗಪ್ಪ ಎಂಬುವವರ 17 ವರ್ಷದ ಮಗಳು ರಂಜಿತಾ. ದಾವಣಗೆರೆಯ ಟೀಮ್‌ ಅಕಾಡೆಮಿಯಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ಈಕೆಯ ಪ್ರತಿಭೆಗೆ ಪೋಷಕರು ಬೆನ್ನೆಲುಬಾಗಿ ನಿಂತಿದ್ದರು. ನಾಲ್ಕೈದು ದಿನಗಳ ಹಿಂದಷ್ಟೇ ಸ್ವಗ್ರಾಮದಲ್ಲಿ ನಡೆದಿದ್ದ ಹೊಸ ಮನೆಯ ಗೃಹಪ್ರವೇಶಕ್ಕೆ ಬಂದಿದ್ದ ರಂಜಿತಾ, ಸಂಭ್ರಮದಿಂದ ಎಲ್ಲರೊಂದಿಗೆ ಬೆರೆತು ಕಾಲೇಜಿಗೆ ಮರಳಿದ್ದಳು. ಅಂದು ಆಕೆ ಮನೆಯಲ್ಲಿ ನಲಿದಾಡಿದ್ದೇ ಕೊನೆ.. ಆ ಕ್ಷಣಗಳೇ ಹೆತ್ತವರ ಪಾಲಿಗೆ ಕೊನೆಯ ನೆನಪಾಗುತ್ತವೆ ಎಂದು ಯಾರೂ ಊಹಿಸಿರಲಿಲ್ಲ.

ಆ ಕೆಲವು ಗಂಟೆಗಳಲ್ಲಿ ಆಗಿದ್ದೇನು?

ಘಟನೆ ನಡೆದ ದಿನ ಬೆಳಗ್ಗೆಯೂ ತಾಯಿಗೆ ಫೋನ್‌ ಮಾಡಿದ್ದ ರಂಜಿತಾ ಎಂದಿನಂತೆ ಪ್ರೀತಿಯಿಂದಲೇ ಮಾತನಾಡಿದ್ದಳು. ಆದರೆ ಸಂಜೆ 5:30ರ ಸುಮಾರಿಗೆ ಕಾಲೇಜಿನಿಂದ ‘ಹಾಸ್ಟೆಲ್ ರೂಮ್‌ಗೆ ಹೋಗುತ್ತೇನೆ’ ಎಂದು ಒಬ್ಬಳೇ ತೆರಳಿದ್ದಾಳೆ. ರಾತ್ರಿ 8:30ರ ಸುಮಾರಿಗೆ ಜೊತೆಗಿದ್ದ ಸ್ನೇಹಿತೆಯರು ಕೊಠಡಿಗೆ ಬಂದು ಎಷ್ಟೇ ಬಾಗಿಲು ಬಡಿದರೂ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಗಾಬರಿಗೊಂಡ ವಿದ್ಯಾರ್ಥಿನಿಯರು ಹಾಸ್ಟೆಲ್ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಬಾಗಿಲು ಒಡೆದು ನೋಡಿದಾಗ ಕಂಡ ದೃಶ್ಯ ಎಂಥವರ ಎದೆಯನ್ನೂ ನಡುಗಿಸುವಂತಿತ್ತು—ಕಿಟಕಿಯ ಸರಳಿಗೆ ನೇತಾಡುತ್ತಿದ್ದ ಸ್ಥಿತಿಯಲ್ಲಿ ರಂಜಿತಾ ಶವ ಪತ್ತೆಯಾಗಿದೆ.

ಮೂರೇ ಅಡಿ ಎತ್ತರದ ಕಿಟಕಿ: ಮೂಡಿದೆ ಹತ್ತಾರು ಅನುಮಾನ!

ಈ ಸಾವು ಕೇವಲ ಆತ್ಮಹತ್ಯೆಯಲ್ಲ, ಇದರ ಹಿಂದೆ ಬೇರೆಯದ್ದೇ ಹುನ್ನಾರವಿದೆ ಎಂಬುದು ಕುಟುಂಬಸ್ಥರ ಗಂಭೀರ ಆರೋಪ.

ಕೇವಲ 3 ಅಡಿ ಎತ್ತರದ ಕಿಟಕಿಯಲ್ಲಿ ಒಬ್ಬ ವ್ಯಕ್ತಿ ನೇಣು ಬಿಗಿದುಕೊಳ್ಳಲು ಹೇಗೆ ಸಾಧ್ಯ?

ಕೊಠಡಿಯಲ್ಲಿ ಯಾವುದೇ ಡೆತ್‌ನೋಟ್‌ ಪತ್ತೆಯಾಗಿಲ್ಲ.ಬೆಳಗ್ಗೆಯಷ್ಟೇ ಮನೆಯವರೊಂದಿಗೆ ಉತ್ಸಾಹದಿಂದ ಮಾತನಾಡಿದ ಹುಡುಗಿ ಸಂಜೆಯಾಗುವಷ್ಟರಲ್ಲಿ ಇಂಥ ನಿರ್ಧಾರಕ್ಕೆ ಬರಲು ಕಾರಣವೇನು?"ನಮ್ಮ ಮಗಳು ಹೇಡಿಯಲ್ಲ, ಅವಳ ಸಾವಿನ ಹಿಂದೆ ಯಾರದ್ದೋ ಕೈವಾಡವಿದೆ. ಕಾಲೇಜು ಆಡಳಿತ ಮಂಡಳಿ ಹಾಗೂ ಪೊಲೀಸರು ಸೂಕ್ತ ತನಿಖೆ ನಡೆಸಿ ನಮಗೆ ನ್ಯಾಯ ಒದಗಿಸಬೇಕು," ಎಂದು ತಂದೆ ನಿಂಗಪ್ಪ ಹಾಗೂ ಸಂಬಂಧಿಕರು ಕಣ್ಣೀರಿಡುತ್ತಿದ್ದಾರೆ.

ಆಡಳಿತ ಮಂಡಳಿ ಹೇಳೋದೇನು?

ಘ


ಟನೆ ಬೆನ್ನಲ್ಲೇ ಕಾಲೇಜಿಗೆ ರಜೆ ಘೋಷಿಸಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಟೀಮ್ ಅಕಾಡೆಮಿಯ ಚೇರ್ಮನ್ ಮಂಜಪ್ಪ, "ಊರಿನಿಂದ ಬಂದಾಗಿನಿಂದ ಆಕೆ ಕೊಂಚ ಖಿನ್ನತೆಯಲ್ಲಿದ್ದಳು ಎಂಬ ಮಾಹಿತಿ ನಮಗೆ ಸಿಕ್ಕಿದೆ. ಮಗಳನ್ನು ಕಳೆದುಕೊಂಡ ದುಃಖದಲ್ಲಿ ಕುಟುಂಬಸ್ಥರು ಕೊಲೆ ಆರೋಪ ಮಾಡುತ್ತಿದ್ದಾರೆ. ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಲಿ, ಸತ್ಯಾಸತ್ಯತೆ ಹೊರಬರಲಿ," ಎಂದಿದ್ದಾರೆ.ಹೆತ್ತವರ ಪಾಲಿನ ನಂದಾದೀವಿಗೆಯಂತಿದ್ದ ಮಗಳು ಅರ್ಧ ದಾರಿಯಲ್ಲೇ ಬಾಡಿ ಹೋಗಿದ್ದಾಳೆ. ಇದು ನಿಜಕ್ಕೂ ಆತ್ಮಹತ್ಯೆಯಾ ಅಥವಾ ವ್ಯವಸ್ಥಿತ ಕೃತ್ಯವಾ ಎಂಬುದು ಪಾರದರ್ಶಕ ತನಿಖೆಯ ನಂತರವಷ್ಟೇ ಬಯಲಾಗಬೇಕಿದೆ.

Nandheesh kumar ac
Deamweb News ಪೋರ್ಟಲ್‌ನ ಸಂಪಾದಕೀಯ ಮಂಡಳಿ. ನಿಖರ, ನಿಷ್ಪಕ್ಷಪಾತ ಹಾಗೂ ಕ್ಷಣಕ್ಷಣದ ತಾಜಾ ಸುದ್ದಿಗಳನ್ನು ಒದಗಿಸುವುದು ನಮ್ಮ ಗುರಿ.

ನಿಮ್ಮ ಅಭಿಪ್ರಾಯ ತಿಳಿಸಿ