ಸುದ್ದಿ ಪೋರ್ಟಲ್

Deamweb News

ತಾಜಾ ಸುದ್ದಿ
ಇತ್ತೀಚಿನ ಸುದ್ದಿಗಳನ್ನು ಲೋಡ್ ಮಾಡಲಾಗುತ್ತಿದೆ...

ಮುಖಪುಟ / ಸುದ್ದಿ ವಿವರ

ಶಿವಮೊಗ್ಗ ಗಣಪತಿ ವಿಸರ್ಜನೆಗೆ ಖಾಕಿ ಕೋಟೆ: 3 ಸಾವಿರಕ್ಕೂ ಹೆಚ್ಚು ಸಿಬ್ಬಂದಿ, 12 ಡ್ರೋನ್ ಕಣ್ಗಾವಲು; ಶಾಲೆಗಳಿಗೆ ಮಧ್ಯಾಹ್ನ ರಜೆ”

 




ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆಗೆ ಸಜ್ಜು: 3 ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ, 12 ಡ್ರೋನ್‌ ಕಣ್ಗಾವಲು

ಶಿವಮೊಗ್ಗ, ಸೆ.24: ಶಿವಮೊಗ್ಗ ನಗರದಲ್ಲಿ ಸೆ.25ರಂದು ನಡೆಯಲಿರುವ ಹಿಂದೂ ಮಹಾಸಭಾ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ವ್ಯಾಪಕ ಬಂದೋಬಸ್ತ್ ಕೈಗೊಂಡಿದೆ. ಸಾವಿರಾರು ಪೊಲೀಸ್ ಅಧಿಕಾರಿ-ಸಿಬ್ಬಂದಿ ಹಾಗೂ ಹೋಂ ಗಾರ್ಡ್‌ಗಳನ್ನು ಭದ್ರತೆಗೆ ನಿಯೋಜಿಸಲಾಗಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಹಾಗೂ ಡ್ರೋನ್ ಕ್ಯಾಮೆರಾಗಳ ಮೂಲಕ ನಿಗಾ ವಹಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಪೊಲೀಸ್ ಇಲಾಖೆಯ ಪ್ರಕಟಣೆಯ ಪ್ರಕಾರ, ಎಸ್‌ಪಿ/ಹೆಚ್ಚುವರಿ ಎಸ್‌ಪಿ ಹಂತದ 5 ಅಧಿಕಾರಿಗಳು, 22 ಡಿವೈಎಸ್‌ಪಿ, 84 ಸಿಪಿಐ/ಪಿಐ, 289 ಪಿಎಸ್‌ಐ/ಆರ್‌ಎಸ್‌ಐ, 108 ಎಎಸ್‌ಐ/ಎಆರ್‌ಎಸ್‌ಐ, 2,134 ಎಚ್‌ಸಿ/ಪಿಸಿ ಹಾಗೂ 600 ಹೋಂ ಗಾರ್ಡ್‌ಗಳನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ.

ಇದರೊಂದಿಗೆ 12 ಕೆಎಸ್‌ಆರ್‌ಪಿ, 10 ಡಿಎಆರ್ ತುಕಡಿಗಳು, 2 ಕ್ಯೂಆರ್‌ಟಿ, 1 ಡಿ-ಸ್ವಾಟ್, 2 ಆರ್‌ಎಎಫ್, 1 ಎಸ್‌ಎಎಫ್ ಹಾಗೂ 1 ಎಎಸ್‌ಸಿ ತಂಡವನ್ನು ನಿಯೋಜಿಸಲಾಗಿದೆ. ತುರ್ತು ಪರಿಸ್ಥಿತಿಯನ್ನು ಎದುರಿಸಲು 7 ಅಗ್ನಿಶಾಮಕ ವಾಹನ ಹಾಗೂ 4 ಆಂಬುಲೆನ್ಸ್‌ಗಳ ವ್ಯವಸ್ಥೆಯನ್ನೂ ಮಾಡಲಾಗಿದೆ. ಮೆರವಣಿಗೆಯ ಮೇಲೆ ನಿಗಾ ಇಡಲು ವಿಡಿಯೊ ಕ್ಯಾಮೆರಾ ಮತ್ತು ಸಿಸಿಟಿವಿ ಸೇರಿದಂತೆ ಸುಮಾರು 3,500 ಕ್ಯಾಮೆರಾಗಳು ಹಾಗೂ 12 ಡ್ರೋನ್ ಕ್ಯಾಮೆರಾಗಳನ್ನು ಬಳಸಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

35 ಮಂದಿ ಗಡಿಪಾರು

ಮುಂಜಾಗ್ರತಾ ಕ್ರಮವಾಗಿ ಶಿವಮೊಗ್ಗ ಜಿಲ್ಲೆಯಾದ್ಯಂತ 900 PAR ಪ್ರಕರಣಗಳನ್ನು ದಾಖಲಿಸಲಾಗಿದ್ದು, 35 ಮಂದಿಯನ್ನು ಗಡಿಪಾರು ಮಾಡಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ. ಮೆರವಣಿಗೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟುನಿಟ್ಟಿನ ನಿಗಾ ವಹಿಸಲು ಕ್ರಮ ಕೈಗೊಳ್ಳಲಾಗಿದೆ.

ಶಾಲೆಗಳಿಗೆ ಮಧ್ಯಾಹ್ನ ರಜೆ

ಗಣಪತಿ ವಿಸರ್ಜನಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸೆ.25ರಂದು ಶಿವಮೊಗ್ಗ ನಗರ ವ್ಯಾಪ್ತಿಯ ಶಾಲೆಗಳಿಗೆ ಬೆಳಗಿನ ಅವಧಿಯಲ್ಲಿ ಮಾತ್ರ ಪರೀಕ್ಷೆ ಹಾಗೂ ಶೈಕ್ಷಣಿಕ ಚಟುವಟಿಕೆ ನಡೆಸುವಂತೆ ಸೂಚಿಸಲಾಗಿದೆ.

ಬೆಳಿಗ್ಗೆ 8.30ರಿಂದ ಮಧ್ಯಾಹ್ನ 12.30ರವರೆಗೆ ಪರೀಕ್ಷಾ ಕಾರ್ಯ ನಡೆಸಿ, ನಂತರ ವಿದ್ಯಾರ್ಥಿಗಳು ಸುರಕ್ಷಿತವಾಗಿ ಮನೆ ತಲುಪುವಂತೆ ಮಧ್ಯಾಹ್ನ ರಜೆ ಘೋಷಿಸಲು ಮುಖ್ಯ ಶಿಕ್ಷಕರಿಗೆ ಸೂಚಿಸಲಾಗಿದೆ. ಮಧ್ಯಾಹ್ನದ ಅವಧಿಯಲ್ಲಿ ಕೊರತೆಯಾಗುವ ತರಗತಿಗಳನ್ನು ಮುಂದಿನ ದಿನಗಳಲ್ಲಿ ಸರಿದೂಗಿಸುವಂತೆ ತಿಳಿಸಲಾಗಿದೆ.

ಆದರೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಅರ್ಧವಾರ್ಷಿಕ ಪರೀಕ್ಷೆ ರಾಜ್ಯಮಟ್ಟದ ನಿಗದಿತ ವೇಳಾಪಟ್ಟಿಯಂತೆ ಬೆಳಿಗ್ಗೆ 9ರಿಂದ ಮಧ್ಯಾಹ್ನ 1.30ರವರೆಗೆ ನಡೆಯಲಿದೆ ಎಂದು ತಹಶೀಲ್ದಾರ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸೂಚನೆಯಲ್ಲಿ ತಿಳಿಸಲಾಗಿದೆ.


Nandheesh kumar ac
Deamweb News ಪೋರ್ಟಲ್‌ನ ಸಂಪಾದಕೀಯ ಮಂಡಳಿ. ನಿಖರ, ನಿಷ್ಪಕ್ಷಪಾತ ಹಾಗೂ ಕ್ಷಣಕ್ಷಣದ ತಾಜಾ ಸುದ್ದಿಗಳನ್ನು ಒದಗಿಸುವುದು ನಮ್ಮ ಗುರಿ.

ನಿಮ್ಮ ಅಭಿಪ್ರಾಯ ತಿಳಿಸಿ