ಸುದ್ದಿ ಪೋರ್ಟಲ್

Deamweb News

ತಾಜಾ ಸುದ್ದಿ
ಇತ್ತೀಚಿನ ಸುದ್ದಿಗಳನ್ನು ಲೋಡ್ ಮಾಡಲಾಗುತ್ತಿದೆ...

ಮುಖಪುಟ / ಸುದ್ದಿ ವಿವರ

ಭದ್ರಾವತಿ ಪತ್ನಿ ಮನೆಗೆ ಬಾರದ ಹಿನ್ನೆಲೆ ವ್ಯಕ್ತಿ ನೇಣಿಗೆ ಶರಣು



ಭದ್ರಾವತಿ : ಕುಟುಂಬದ ಕಲಹ ಹಿನ್ನೆಲೆಯಲ್ಲಿ ಉಂಟಾದ ಭಿನ್ನಾಭಿಪ್ರಾಯದಿಂದ ವ್ಯಕ್ತಿಯೊಬ್ಬರು  37 ವರ್ಷದ ವ್ಯಕ್ತಿಯೊಬ್ಬರು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭದ್ರಾವತಿಯ ದೇವರಾಜ ಅರಸು ಬಡಾವಣೆಯಲ್ಲಿ ನಡೆದಿದೆ.

ಸಂಸಾರದಲ್ಲಿ ಉಂಟಾದ ಭಿನ್ನಾಭಿಪ್ರಾಯ, ಪತ್ನಿ ತವರು ಮನೆಗೆ ತೆರಳಿದ ಬಳಿಕ ಉಂಟಾದ ಮಾನಸಿಕ ಬೇಸರ ಹಾಗೂ ಮದ್ಯದ ಚಟದ ಹಿನ್ನೆಲೆಯಲ್ಲಿ ಸುಶೀಲ್ (37) ಕುಮಾರ್ ನೇಣಿಗೆ ಶರಣಾಗಿದ್ದಾರೆ ಅವರು ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದರು. ಈ ಸಂಬಂಧ ಭದ್ರಾವತಿ ಹಳೇನಗರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು (ಯುಡಿಆರ್) ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಪೊಲೀಸ್ ದಾಖಲೆಗಳ ಪ್ರಕಾರ, ಸುಶೀಲ್ ಕುಮಾರ್ ಅವರ ಪತ್ನಿ ಸರಳಾ ಸುಮಾರು ಐದು ತಿಂಗಳ ಹಿಂದೆ ಕುಟುಂಬದ ವಿಚಾರವಾಗಿ ಮನಸ್ತಾಪ ಉಂಟಾದ ಹಿನ್ನೆಲೆಯಲ್ಲಿ ತಮ್ಮ ತವರು ಮನೆ ಸಕಲೇಶಪುರಕ್ಕೆ ತೆರಳಿದ್ದರು. ದೂರವಾಣಿ ಮೂಲಕ ಇಬ್ಬರೂ ಸಂಪರ್ಕದಲ್ಲಿದ್ದರೂ, ಪತ್ನಿ ದೂರವಾಗಿದ್ದ ವಿಚಾರವನ್ನು ಸುಶೀಲ್ ಕುಮಾರ್ ಮನಸ್ಸಿಗೆ ಹಚ್ಚಿಕೊಂಡಿದ್ದರು ಎನ್ನಲಾಗಿದೆ. ಇದೇ ಸಮಯದಲ್ಲಿ ಅವರು ಅತಿಯಾಗಿ ಮದ್ಯಪಾನ ಮಾಡುವ ಚಟಕ್ಕೆ ಒಳಗಾಗಿದ್ದು, ಕುಟುಂಬದವರು ಹಲವು ಬಾರಿ ಮನವೊಲಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಿರಲಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. 

ಜುಲೈ 6ರಂದು ಸುಶೀಲ್ ಕುಮಾರ್ ಕೆಲಸಕ್ಕೆ ತೆರಳದೇ ಮನೆಯಲ್ಲೇ ಇದ್ದರು. ಸಂಜೆ ವೇಳೆ ಅವರ ತಾಯಿ ಸಂಬಂಧಿಕರೊಬ್ಬರನ್ನು ಆಸ್ಪತ್ರೆಯಲ್ಲಿ ನೋಡಲು ಹೋಗಿ ಮನೆಗೆ ಮರಳಿದಾಗ, ಸುಶೀಲ್ ಕುಮಾರ್ ಮನೆಯಲ್ಲಿ ಕಾಣಿಸಿರಲಿಲ್ಲ. ಎಲ್ಲೆಡೆ ಹುಡುಕಿದ ಬಳಿಕ ಮಲಗುವ ಕೋಣೆಯಲ್ಲಿ ಸೀಲಿಂಗ್ ಫ್ಯಾನ್‌ಗೆ ಬಟ್ಟೆಯಿಂದ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ.

ತಕ್ಷಣ ಅಕ್ಕಪಕ್ಕದವರ ನೆರವಿನಿಂದ ಅವರನ್ನು ಕೆಳಗಿಳಿಸಿ ಆಂಬುಲೆನ್ಸ್ ಮೂಲಕ ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಪರೀಕ್ಷಿಸಿದ ವೈದ್ಯರು ಅವರು ಈಗಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದರು.

ಮೃತರ ತಂದೆ ಕೃಪಯ್ಯ ನೀಡಿದ ದೂರಿನಲ್ಲಿ, ತಮ್ಮ ಮಗ ಸಂಸಾರದ ಸಮಸ್ಯೆ, ಪತ್ನಿ ತವರು ಮನೆಗೆ ತೆರಳಿದ ಬೇಸರ ಅಥವಾ ಇತರ ವೈಯಕ್ತಿಕ ಕಾರಣಗಳಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ತಿಳಿಸಿದ್ದಾರೆ. ತಮ್ಮ ಮಗನ ಸಾವಿನ ಬಗ್ಗೆ ಯಾವುದೇ ಅನುಮಾನವಿಲ್ಲ ಎಂದು ಸಹ ಅವರು ದೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ.

ಘಟನೆ ಜುಲೈ 6ರಂದು ಸಂಜೆ 7.10ರಿಂದ 7.30ರ ಅವಧಿಯಲ್ಲಿ ನಡೆದಿರುವುದಾಗಿ ದಾಖಲಾಗಿದೆ. ಜುಲೈ 7ರಂದು ಬೆಳಿಗ್ಗೆ ಮೃತರ ತಂದೆ ನೀಡಿದ ಲಿಖಿತ ದೂರಿನ ಆಧಾರದ ಮೇಲೆ ಭದ್ರಾವತಿ ಹಳೇನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಪ್ರಕರಣದ ಕುರಿತು ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ. 


  

Nandheesh kumar ac
Deamweb News ಪೋರ್ಟಲ್‌ನ ಸಂಪಾದಕೀಯ ಮಂಡಳಿ. ನಿಖರ, ನಿಷ್ಪಕ್ಷಪಾತ ಹಾಗೂ ಕ್ಷಣಕ್ಷಣದ ತಾಜಾ ಸುದ್ದಿಗಳನ್ನು ಒದಗಿಸುವುದು ನಮ್ಮ ಗುರಿ.

ನಿಮ್ಮ ಅಭಿಪ್ರಾಯ ತಿಳಿಸಿ