ಸುದ್ದಿ ಪೋರ್ಟಲ್

Deamweb News

ತಾಜಾ ಸುದ್ದಿ
ಇತ್ತೀಚಿನ ಸುದ್ದಿಗಳನ್ನು ಲೋಡ್ ಮಾಡಲಾಗುತ್ತಿದೆ...

ಮುಖಪುಟ / ಸುದ್ದಿ ವಿವರ

ದಾವಣಗೆರೆ : ಡಾ.ರಾಘವನ್ ಬಗ್ಗೆ ಪಂಡಿತಾರಾಧ್ಯ ಶ್ರೀಗಳು ಹೇಳಿದ್ದೇನು?




ದಾವಣಗೆರೆ : ವೈದ್ಯಕೀಯ ಕ್ಷೇತ್ರ ಸೇವಾ ಮನೋಭಾವ ಹೊಂದಿರುವ ಕ್ಷೇತ್ರ. ವೈದ್ಯರು ಸೇವಾ ಮನೋಭಾವದ ಜೊತೆ ಆದರ್ಶಪ್ರಾಯರಾಗಿರಬೇಕು ಎಂದು ಸಾಣೇಹಳ್ಳಿ ಶ್ರೀಗಳಾದ ಪಂಡಿತಾರಾಧ್ಯ ಸ್ವಾಮೀಜಿಯವರು ಕರೆ ನೀಡಿದರು. ಜಿಲ್ಲಾ ಸರ್ಕಾರಿ ನೌಕರರ ಸಂಘ, ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಮತ್ತು ಇತರ ಸಂಘ ಸಂಸ್ಥೆಗಳ ವತಿಯಿಂದಇತ್ತೀಚಿಗೆ ನಡೆದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ.ರಾಘವನ್ ಅವರ ಬೀಳ್ಕೊಡುಗೆ ಸಮಾರಂಭದ ಸಾನ್ನಿಧ್ಯ ವಹಿಸಿ ಸ್ವಾಮೀಜಿಯವರು ಮಾತಾಡಿದರು. 

ವೈದ್ಯರು ರೋಗಿಗಳನ್ನು ಅಂತಃಕರಣದಿಂದ ಕಾಣಬೇಕು. ಅವರಿಗೆ ಮನೋಸ್ಥೈರ್ಯ ತುಂಬಬೇಕು. ತಾಳ್ಮೆ, ಹಾಗೂ ಮೃದುವಾಗಿ ವರ್ತಿಸಬೇಕು. ಅವರ ಸಮಸ್ಯೆಗಳನ್ನು ಅರಿತು ಮಾನವೀಯತೆಯಿಂದ ಚಿಕಿತ್ಸೆ ನೀಡಬೇಕು ಎಂದು ತಿಳಿಸಿದರು. ಮತ್ತು ಈಗ ರಾಜಕೀಯ ಕ್ಷೇತ್ರ ಕಲುಷಿತಗೊಂಡಿದ್ದು ಸಜ್ಜನರು ರಾಜಕೀಯ ಪ್ರವೇಶ ಮಾಡಿ ಪ್ರಸ್ತುತ ವಾತಾವರಣವನ್ನು ತಿಳಿಗೊಳಿಸಬೇಕೆಂದು ಹೇಳಿದರು. ಡಾ.ರಾಘವನ್ ಅವರ ತಂದೆ ಜಿ.ದುಗ್ಗಪ್ಪ ನವರು 4 ಬಾರಿ ಶಾಸಕರಾಗಿ ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರು ಆಗಿ ಪ್ರಾಮಾಣಿಕ ಸೇವೆ ಸಲ್ಲಿಸಿದ್ದನ್ನು ಸ್ಮರಿಸಿದ ಶ್ರೀಗಳು  ಇಂದಿನ ದಿನಮಾನಗಳಲ್ಲಿ ಶುದ್ಧ ಪ್ರಾಮಾಣಿಕ ಸಜ್ಜನರ ಅವಶ್ಯಕತೆ ರಾಜಕೀಯ ಮತ್ತು ಸಮಾಜಕ್ಕೆ ಇದೆ ಎಂದು ತಿಳಿಸಿದರು. ಕಳೆದ ಸುಮಾರು 30 ವರ್ಷಗಳಲ್ಲಿ ಡಾ.ರಾಘವನ್ ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳಾಗಿ ತಂದೆಯ ಹಾದಿಯಲ್ಲಿ ಡಾ.ರಾಘವನ್ ಸಾಗಿದ್ದಾರೆ ಎಂದು ಪ್ರಶಂಸಿಸಿ, ಅವರ ಸೇವೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಮುಂದುವರೆಯಲಿ ಎಂದು ಆಶೀರ್ವಚನ ನೀಡಿದರು. 

ಸಾನ್ನಿಧ್ಯ ವಹಿಸಿದ್ದ ಮತ್ತೊಬ್ಬ ಸ್ವಾಮೀಜಿಯವರಾದ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮಿಯವರು ಮಾತನಾಡಿ, ವೈದ್ಯರು ವೃತ್ತಿಪರತೆ ಜೊತೆಯಲ್ಲಿ ಮಾನವೀಯತೆ ಹಾಗೂ ತ್ಯಾಗದ ಮನೋಭಾವಗಳನ್ನು ಹೊಂದಿರಬೇಕು ಎಂದು ತಿಳಿಸಿದರು. 

ಮುಖ್ಯ ಅತಿಥಿಗಳಾಗಿ ಮಾತನಾಡಿದ ಪ್ರೊ. ಮಲ್ಲಿಕಾರ್ಜುನ ಹಲಸಂಗಿ ಅವರು, ಸಮಾಜದಲ್ಲಿ ಮೌಲ್ಯಗಳು ಕುಂಠಿತವಾಗುತ್ತಿರುವ ಇತ್ತೀಚಿನ ದಿನಗಳಲ್ಲಿ ಡಾ. ರಾಘವನ್ ಅವರ ಸೇವೆಯು ಆದರ್ಶಪ್ರಾಯವಾಗಿದೆ ಎಂದು ತಿಳಿಸಿದರು. 

ಡಾ. ರಾಘವನ್ ಅವರು ಕೋವಿಡ್ ಸಂದರ್ಭದಲ್ಲಿ ರೋಗಿಗಳನ್ನು ಕರೆ ತರುವಲ್ಲಿ, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಒದಗಿಸುವಲ್ಲಿ ಹಗಲಿರುಳು ಶ್ರಮಿಸಿದ್ದಾರೆ ಎಂದು ಡಾ.ಸಿ.ಹೆಚ್.ಮುರುಘೇಂದ್ರಪ್ಪ ತಿಳಿಸಿದರು. 

ಸರ್ಕಾರಿ ನೌಕರಿಯು ಈಗ ಸವಾಲಾಗಿ ಪರಿಣಮಿಸಿದೆ, ಈ ಸವಾಲುಗಳನ್ನು ಮೆಟ್ಟಿ ನಿಂತು ಡಾ. ರಾಘವನ್ ಅವರು ಯಶಸ್ವಿಯಾಗಿ ಸೇವೆ ಸಲ್ಲಿಸಿದ್ದಾರೆ ಎಂದು ನಿವೃತ್ತ ಎಸ್. ಪಿ ಶ್ರೀ ರವಿನಾರಾಯಣ ತಿಳಿಸಿದರು. ಮತ್ತೋರ್ವ ಮುಖ್ಯ ಅತಿಥಿ ಶ್ರೀ ಆನಂದ್ ಗೌಡ ಅವರು ಮಾತನಾಡಿ ಡಾ. ರಾಘವನ್ ಅವರು ಜಿಲ್ಲೆಯ ಸರ್ಕಾರಿ ವೈದ್ಯರಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು. 

ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಶ್ರೀ ಸಿ. ಪರಶುರಾಮಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಜಿ.ಡಿ.ರಾಘವನ್ ಅವರು ತಮ್ಮ ಸೇವಾವಧಿಯಲ್ಲಿ ತಮಗೆ ಸಹಕಾರ, ಬೆಂಬಲ ನೀಡಿದ ಜಿಲ್ಲಾಧಿಕಾರಿಗಳು, ಜಿ. ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಆರೋಗ್ಯಾಧಿಕಾರಿಗಳು, ಮತ್ತು ಇಲಾಖೆಯ ಎಲ್ಲರಿಗೂ ಕೃತಜ್ಞತೆ ತಿಳಿಸಿದರು. 

ಕೋವಿಡ್ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ್ದು ತಮಗೆ ದೊರೆತ ಅವಕಾಶ, ಮತ್ತು ಅಂತಹ ಕ್ಲಿಷ್ಟಕರ ಸಮಯದಲ್ಲಿ ತಮಗೆ ನೈತಿಕ ಸ್ಥೈರ್ಯ, ಬೆಂಬಲ ನೀಡಿದ ಮಾಧ್ಯಮಗಳ ಪ್ರತಿನಿಧಿಗಳಿಗೆ ವಿಶೇಷವಾದ ಧನ್ಯವಾದ ಸಲ್ಲಿಸಿದರು. ಡಾ. ರಾಘವನ್ ಅವರ ಕುರಿತು ನೇರ್ಲಿಗೆ ಶ್ರೀ ಎನ್. ಜಿ. ಸ್ವಾಮಿ ಹಾಗೂ ಶ್ರೀ ಚಿದಾನಂದ್ ಅವರು ಮಾತನಾಡಿದರು. ಶ್ರೀ ಮಿಲಿಂದ್ ಕುಮಾರ್ ಅವರು ವಂದನಾರ್ಪಣೆ ಮಾಡಿದರು.

Nandheesh kumar ac
Deamweb News ಪೋರ್ಟಲ್‌ನ ಸಂಪಾದಕೀಯ ಮಂಡಳಿ. ನಿಖರ, ನಿಷ್ಪಕ್ಷಪಾತ ಹಾಗೂ ಕ್ಷಣಕ್ಷಣದ ತಾಜಾ ಸುದ್ದಿಗಳನ್ನು ಒದಗಿಸುವುದು ನಮ್ಮ ಗುರಿ.

ನಿಮ್ಮ ಅಭಿಪ್ರಾಯ ತಿಳಿಸಿ