ಇನ್ಮುಂದೆ ಒಂದು ವರ್ಷದವರೆಗೆ ಗುಟ್ಕಾ ಸಿಗೋದಿಲ್ಲ..ಸರಕಾರದಿಂದ ಬ್ಯಾನ್ ಯಾಕೆ ಗೊತ್ತಾ?
ಬೆಂಗಳೂರು: ಆಹಾರ ಸುರಕ್ಷತೆ ಮತ್ತು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಕರ್ನಾಟಕ ಸರ್ಕಾರ ಬುಧವಾರ ಮಹತ್ವದ ಆದೇಶ ಹೊರಡಿಸಿದ್ದು, ಪಾನ್ ಮಸಾಲಾ ಉತ್ಪನ್ನಗಳ ಮೇಲೆ ಒಂದು ವರ್ಷದ ನಿಷೇಧ ಹೇರಿದೆ.
ರಾಜ್ಯಾದ್ಯಂತ ಗುಟ್ಕಾ ಹಾಗೂ ತಂಬಾಕು ಅಥವಾ ನಿಕೋಟಿನ್ ಒಳಗೊಂಡ ಪಾನ್ ಮಸಾಲಾ ಉತ್ಪನ್ನಗಳ ಮೇಲೆ ಒಂದು ವರ್ಷದ ನಿಷೇಧ ಹೇರಲಾಗಿದ್ದು, ಗುಟ್ಕಾ ಹಾಗೂ ತಂಬಾಕು ಅಥವಾ ನಿಕೋಟಿನ್ ಒಳಗೊಂಡ ಪಾನ್ ಮಸಾಲಾ ಉತ್ಪನ್ನಗಳ ತಯಾರಿಕೆ, ದಾಸ್ತಾನು, ವಿತರಣೆ, ಸಾಗಣೆ ಮತ್ತು ಮಾರಾಟವನ್ನು ಆಹಾರ ಸುರಕ್ಷತಾ ಆಯುಕ್ತರು ನಿಷೇಧಿಸಿದ್ದಾರೆ.ಇದಲ್ಲದೆ, ಪಾನ್ ಮಸಾಲಾದೊಂದಿಗೆ ಮಿಶ್ರಣ ಮಾಡಲು ಅನುಕೂಲವಾಗುವಂತೆ ಪ್ರತ್ಯೇಕವಾಗಿ ಪ್ಯಾಕ್ ಮಾಡಿ ಮಾರಾಟ ಮಾಡುವ ತಂಬಾಕು ಉತ್ಪನ್ನಗಳಿಗೂ ಈ ನಿಷೇಧ ಅನ್ವಯವಾಗಲಿದೆ.
ಈ ಕ್ರಮದಿಂದ ರಾಜ್ಯಾದ್ಯಂತ ಇಂತಹ ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟಕ್ಕೆ ಒಂದು ವರ್ಷದ ಮಟ್ಟಿಗೆ ಸಂಪೂರ್ಣ ತಡೆ ಬೀಳಲಿದೆ. ಆದೇಶ ಉಲ್ಲಂಘಿಸುವ ತಯಾರಕರು, ವಿತರಕರು, ಚಿಲ್ಲರೆ ವ್ಯಾಪಾರಿಗಳು ಸೇರಿದಂತೆ ಸಂಬಂಧಪಟ್ಟವರ ವಿರುದ್ಧ ತಪಾಸಣೆ ನಡೆಸಿ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗುವ ನಿರೀಕ್ಷೆಯಿದೆ.
ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದಾದ ತಂಬಾಕು ಮತ್ತು ನಿಕೋಟಿನ್ ಉತ್ಪನ್ನಗಳ ಬಳಕೆಯನ್ನು ನಿಯಂತ್ರಿಸುವ ಪ್ರಯತ್ನದ ಭಾಗವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ನಿಮ್ಮ ಅಭಿಪ್ರಾಯ ತಿಳಿಸಿ