ಸುದ್ದಿ ಪೋರ್ಟಲ್

Deamweb News

ತಾಜಾ ಸುದ್ದಿ
ಇತ್ತೀಚಿನ ಸುದ್ದಿಗಳನ್ನು ಲೋಡ್ ಮಾಡಲಾಗುತ್ತಿದೆ...

ಮುಖಪುಟ / ಸುದ್ದಿ ವಿವರ

ಭದ್ರಾವತಿ ; ಕಾರ್ಮಿಕರಿಗೆ ಸಿಗದ ಇಎಸ್ ಐ ರೆಫರಲ್ ಲೆಟರ್, ಬಿಜೆಪಿ ಪ್ರತಿಭಟನೆ ...

 










ಭದ್ರಾವತಿ : ಭದ್ರಾವತಿಯ ಇಎಸ್‌ಐ ಡಿಸ್ಪೆನ್ಸರಿಯಲ್ಲಿ ಖಾಸಗಿ ಆಸ್ಪತ್ರೆಗಳ ರೆಫರಲ್ (ಅನುಮೋದನೆ) ಸೌಲಭ್ಯವನ್ನು ಮರುಸ್ಥಾಪಿಸಲು ಹಾಗೂ ಸ್ಥಳೀಯವಾಗಿ ಅಗತ್ಯವಿರುವ ಖಾಸಗಿ ಆಸ್ಪತ್ರೆಗಳ ಒಪ್ಪಂದವನ್ನು (Tie-up) ದೆಹಲಿಯ ಇಎಸ್ ಐ ಪ್ರಧಾನ ಕಚೇರಿ ಮಹಾನಿರ್ದೇಶಕರು ನವೀಕರಿಸಬೇಕೆಂದು ಸ್ಥಳೀಯ ಬಿಜೆಪಿ ನಾಯಕರು ನಗರದ ಜನ್ನಾಪುರದಲ್ಲಿರುವ ಇಎಸ್ ಐ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು. 

ಭದ್ರಾವತಿಯಲ್ಲಿ ಸುಮಾರು 19 ಸಾವಿರ ಇಎಸ್ ಐ ಫಲಾನುಭವಿಗಳು ಇದ್ದು, ರೆಫೆರೆಲ್ ಲೆಟರ್ ಸಿಗುತ್ತಿಲ್ಲ. ಭದ್ರಾವತಿ ನಗರವು ದಶಕಗಳಿಂದಲೂ ಕಾರ್ಮಿಕರ ಮತ್ತು ಕೈಗಾರಿಕಾ ನಗರವೆಂದೇ ಪ್ರಸಿದ್ದಿಯಾಗಿದೆ. ಪ್ರಸ್ತುತ ಭದ್ರಾವತಿಯ ವಿಐಎಸ್‌ಎಲ್ (VISL) ಸಂಸ್ಥೆಯೊಂದರಲ್ಲೇ ಸುಮಾರು 1400 ಕ್ಕೂ ಹೆಚ್ಚು ಕಾರ್ಮಿಕರು ಇಎಸ್‌ಐ ವ್ಯಾಪ್ತಿಗೆ ಒಳಪಟ್ಟಿದ್ದಾರೆ. ಇದರೊಂದಿಗೆ ಭದ್ರಾವತಿಯ ಸುತ್ತಮುತ್ತ ಇರುವ ಮಾಚೇನಹಳ್ಳಿ ಇಂಡಸ್ಟ್ರಿಯಲ್ ಎಸ್ಟೇಟ್ ನಲ್ಲಿ ಸುಮಾರು 12000 ದಿಂದ 13000 ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ.

ಇಲ್ಲಿನ ಪ್ರಮುಖ ಸಂಸ್ಥೆಯಾದ ಶಾಹಿ ಗಾರ್ಮೆಂಟ್ಸ್ ಒಂದರಲ್ಲೇ ಸುಮಾರು 10000 ಜನ ಕೆಲಸ ಮಾಡುತ್ತಿದ್ದು, ಇವರಲ್ಲಿ 6000 ಕ್ಕೂ ಹೆಚ್ಚು ಕಾರ್ಮಿಕರು ಪ್ರತಿದಿನ ಭದ್ರಾವತಿ ನಗರದಿಂದಲೇ ಅಲ್ಲಿಗೆ ಪ್ರಯಾಣಿಸುತ್ತಾರೆ. ಇವರ ಜೊತೆಗೆ ಭದ್ರಾವತಿ ನಗರದ ಸಣ್ಣಪುಟ್ಟ ಹೋಟೆಲ್ ಗಳು ವಾಣಿಜ್ಯ ಉದ್ಯಮಗಳಲ್ಲಿ ಕೆಲಸ ಮಾಡುವ ಹತ್ತಾರು ಸಾವಿರ ಕಾರ್ಮಿಕರು ಮತ್ತು ಅವರ ಕುಟುಂಬಗಳು ಇಎಸ್‌ಐ ಯೋಜನೆಯನ್ನು ಅವಲಂಬಿಸಿವೆ. ನಮ್ಮ ವೇತನದಿಂದ ಪ್ರತಿ ತಿಂಗಳು ನಿಯಮಿತವಾಗಿ ಇಎಸ್‌ಐ ವಂತಿಗೆಯನ್ನು ಕಡಿತಗೊಳಿಸಲಾಗುತ್ತಿದೆ ಆದರೂ ಪ್ರಯೋಜನವಾಗುತ್ತಿಲ್ಲ.

  ಭದ್ರಾವತಿಯಲ್ಲಿರುವ ಇಎಸ್‌ಐ ಡಿಸ್ಪೆನ್ಸರಿಯು ಪ್ರಸ್ತುತ ಕೇವಲ ಪ್ರಾಥಮಿಕ ಚಿಕಿತ್ಸೆಗೆ ಮಾತ್ರ ಸೀಮಿತವಾಗಿದೆ. ಉಲ್ಲೇಖಿತ ಆದೇಶದ ಅನ್ವಯ, ಈ ಡಿಸ್ಪೆನ್ಸರಿಯಿಂದ ಸ್ಥಳೀಯ ಖಾಸಗಿ ಆಸ್ಪತ್ರೆಗಳಿಗೆ ತುರ್ತು ಮತ್ತು ಉನ್ನತ ಚಿಕಿತ್ಸೆಗಾಗಿ ನೀಡಲಾಗುತ್ತಿದ್ದ 'ರೆಫರಲ್' (ಅನುಮೋದನೆ) ವ್ಯವಸ್ಥೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದರು.

ಭದ್ರಾವತಿಯ ಇಎಸ್‌ಐ ಡಿಸ್ಪೆನ್ಸರಿಗೆ ಖಾಸಗಿ ಆಸ್ಪತ್ರೆಗಳಿಗೆ ರೋಗಿಗಳನ್ನು ನೇರವಾಗಿ ರೆಫರ್ ಮಾಡುವ ಮತ್ತು ಅನುಮೋದಿಸುವ ಅಧಿಕೃತ ಅಧಿಕಾರವನ್ನು ತಕ್ಷಣವೇ ಮರುಸ್ಥಾಪಿಸಬೇಕು.

ಸ್ಥಳೀಯ ಖಾಸಗಿ ಆಸ್ಪತ್ರೆಗಳ ಒಪ್ಪಂದ (Tie-up Hospitals): ಭದ್ರಾವತಿ ಮತ್ತು ಸುತ್ತಮುತ್ತಲಿನ ಪ್ರಮುಖ ಮಲ್ಲಿ-ಸ್ಪೆಷಾಲಿಟಿ ಖಾಸಗಿ ಆಸ್ಪತ್ರೆಗಳೊಂದಿಗೆ ನವೀಕರಿಸಬೇಕು/ಮಾಡಿಕೊಳ್ಳಬೇಕು. ನಿಗಮವು ಇಎಸ್‌ಐ ತಕ್ಷಣವೇ ಒಪೊಪ್ಪಂದವನ್ನು ನವೀಕರಿಸಬೇಕು ಎಂದು ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದರು.

ಯಾವುದೇ ಕಾರಣಕ್ಕೂ ಚಿಕಿತ್ಸಾ ಅನುಮೋದನೆಗಾಗಿ ಭದ್ರಾವತಿಯ ಕಾರ್ಮಿಕರು, ದಾವಣಗೆರೆಯಿಂದ ಅನುಮೋದನೆ ಪಡೆಯುವ ಪದ್ಧತಿಯನ್ನು ತಕ್ಷಣ ನಿಲ್ಲಿಸಬೇಕು. ಅತ್ಯಂತ ಪ್ರಮುಖವಾಗಿ ಈಗ ಇರುವ ಇಎಸ್ ಐ ವ್ಯಾಪ್ತಿಗೆ ಒಳಪಡುವ ಮಾಸಿಕ ರೂ 21 ಸಾವಿರದ ನಿಗದಿಯನ್ನು ಕನಿಷ್ಠಪಕ್ಷ ತಿಂಗಳಿಗೆ 30 ಸಾವಿರಕ್ಕೆ ಹೆಚ್ಚಿಸಬೇಕು ತಿಂಗಳ ಸಂಬಳದಲ್ಲಿ ನಿಯಮಿತವಾಗಿ ಹಣ ಕಡಿತ ಮಾಡಿಸಿಕೊಂಡರೂ ತುರ್ತು ಸಂದರ್ಭದಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ಕಾರ್ಮಿಕರು ಪರದಾಡುತ್ತಿದ್ದಾರೆ.ಒಂದು ವೇಳೆ ಈ ಬೇಡಿಕೆಯನ್ನು ಈಡೇರಿಸದಿದ್ದಲ್ಲಿ ಕಾರ್ಮಿಕರು ಅತ್ಯಂತ ಸಂಕಷ್ಟಕ್ಕೆ ಒಳಗಾಗುತ್ತಾರೆ. ಅವರ ಮಾಸಿಕ ವೇತನವೇ ಜೀವನ ನಿರ್ವಹಣೆಗೆ ಕಷ್ಟವಾಗಿರುವ ಈ ಸಂದರ್ಭದಲ್ಲಿ ಅವರು ಮತ್ತು ಅವರ ಕುಟುಂಬದವರ ಆರೋಗ್ಯದ ವೆಚ್ಚ ಗಗನಕ್ಕೇರಿರುವುದು ತಮ್ಮ ಗಮನದಲ್ಲಿ ಇದೆ. 

ಆದ್ದರಿಂದ ಸಂಸದರು ಮತ್ತು ಇಎಸ್‌ಐ ಹಿರಿಯ ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣವೇ ಭದ್ರಾವತಿಯ ಡಿಸ್ಪೆನ್ಸರಿಯಲ್ಲೇ ಅನುಮೋದನೆ ನೀಡುವ ಆದೇಶ ಹೊರಡಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಭದ್ರಾವತಿಯ ಕಾರ್ಮಿಕರ ಸಂಘಟನೆಗಳು‌, ನಗರ ಮಂಡಲ ಅಧ್ಯಕ್ಷ ಜಿ.ಧರ್ಮಪ್ರಸಾದ್, ಗ್ರಾಮಾಂತರ ಅಧ್ಯಕ್ಷ ಕೆ.ಎಚ್.ತೀರ್ಥಯ್ಯ,  ಗುತ್ತಿಗೆ ಕಾರ್ಮಿಕ ಸಂಘದ ಅಧ್ಯಕ್ಷ ಸುರೇಶ್, ಪ್ರಧಾನ ಕಾರ್ಯದರ್ಶಿ ರಾಕೇಶ್, ಜಿಲ್ಲಾ ಕಾರ್ಯದರ್ಶಿ ಸರಸ್ವತಿ ವಿಜಯಕುಮಾರ್, ಜಿಲ್ಲಾ ವಿಶೇಷ ಆಹ್ವಾನಿತರಾದ  ಹಾಲೇಶ್  ಎಸ್ ಕೂಡ್ಲಿಗೆರೆ, ಮಂಜುನಾಥ್ ಎಮ್, ಮಂಡಲಗಳ ಪ್ರಧಾನ ಕಾರ್ಯದರ್ಶಿಗಳಾದ ಚೆನ್ನೇಶ್, ರಘು ರಾವ್, ಹನುಮಂತ ನಾಯಕ್, ಬಿ ಎಲ್ ಎ ಸುರೇಶಪ್ಪ, ಮಹಿಳಾ ಕಾರ್ಯಕರ್ತರು ಮಂಡಲದ ಪದಾಧಿಕಾರಿಗಳು ಹಾಗೂ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.

....

ದಾವಣಗೆರೆಯಿಂದ ರೆಫೆರೆನ್ಸ್ ಲೆಟರ್ ತರಬೇಕು

ಸದ್ಯದ ನಿಯಮದಂತೆ, ಭದ್ರಾವತಿಯ ಇಎಸ್‌ಐ ಫಲಾನುಭವಿಗಳು ಯಾವುದೇ ಗಂಭೀರ ಕಾಯಿಲೆ ಅಥವಾ ಶಸ್ತ್ರಚಿಕಿತ್ಸೆಗೆ ಅನುಮೋದಿತ ಖಾಸಗಿ ಆಸ್ಪತ್ರೆಗಳಿಗೆ ಹೋಗಬೇಕಾದರೆ, ಸುಮಾರು 120 ಕಿಲೋಮೀಟರ್ ದೂರದಲ್ಲಿರುವ ದಾವಣಗೆರೆಯ ಇಎಸ್‌ಐ ಕೇಂದ್ರದಿಂದಲೇ 'ರೆಫರೆನ್ಸ್' ತರಬೇಕಾಗಿದೆ. ದಿನವಿಡೀ ದುಡಿಯುವ ಗಾರ್ಮೆಂಟ್ಸ್ ಮಹಿಳಾ ಕಾರ್ಮಿಕರು, ಕಾರ್ಖಾನೆ ನೌಕರರು ಸಣ್ಣಪುಟ್ಟ ಕಾಯಿಲೆಗಳಿಗೂ ಹಾಗೂ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳು ಈ ರೀತಿಯ ಅನುಮೋದನೆಯನ್ನು ದಾವಣಗೆರೆಯಿಂದ ತರಬೇಕಾಗಿದೆ. ಇದರಿಂದ 

ಕೆಲವೊಮ್ಮೆ ಪ್ರಾಣಕ್ಕೆ ಕಂಟಕ ತರುವಂತಾಗಿರುತ್ತದೆ. ಇದು ಇಎಸ್‌ಐ ಕಾಯ್ದೆಯ ಮೂಲ ಆಶಯಕ್ಕೆ ವಿರುದ್ಧವಾಗಿದೆ ಎಂದು  ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

Nandheesh kumar ac
Deamweb News ಪೋರ್ಟಲ್‌ನ ಸಂಪಾದಕೀಯ ಮಂಡಳಿ. ನಿಖರ, ನಿಷ್ಪಕ್ಷಪಾತ ಹಾಗೂ ಕ್ಷಣಕ್ಷಣದ ತಾಜಾ ಸುದ್ದಿಗಳನ್ನು ಒದಗಿಸುವುದು ನಮ್ಮ ಗುರಿ.

ನಿಮ್ಮ ಅಭಿಪ್ರಾಯ ತಿಳಿಸಿ