ನಂದೀಶ್ ಭದ್ರಾವತಿ ಶಿವಮೊಗ್ಗ : ಭದ್ರಾ ಡ್ಯಾಂ ನೀರಿನ ಮಟ್ಟ 170 ಅಡಿ ದಾಟಿದ್ದು, ಡ್ಯಾಂ ತುಂಬಲು ಕೇವಲ 16 ಅಡಿ ಬಾಕಿ ಇದೆ..ಈ ನಡುವೆ ಮಳೆಗಾಲಕ್ಕೆ ಭತ್ತ ಬೆಳೆಯಲು ನೀರು ಸಿಗೋದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ...ಈ ನಡುವೆ ರೈತರು ಭತ್ತ ಬೆಳೆಯಬೇಕೋ ಬೇಡವೋ ಎಂಬ ಗೊಂದಲದಲ್ಲಿ ಇದ್ದಾರೆ.
ಸದ್ಯ ಚಿಕ್ಕಮಗಳೂರು ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಎಂಟು ಸಾವಿರ ಕ್ಯೂಸೆಕ್ ನೀರು ಭದ್ರಾ ಜಲಾಶಯಕ್ಕೆ ಬರುತ್ತಿದೆ..ಅಸಲೆ ಮಳೆ ಇನ್ನೂ ಹತ್ತು ದಿವಸ ಇದೆ..ಈ ಮಳೆಗೆ ಡ್ಯಾಂ ತುಂಬಲಿದ್ದು, ನಾಲೆಗೆ ನೀರು ಹರಿಸಬಹುದು ಎಂಬ ಆಶಾಭಾವನೆಯಲ್ಲಿ ರೈತರು ಇದ್ದಾರೆ..ಆದರೆ ನೀರಾವರಿ ಅಧಿಕಾರಿಗಳು ಮಳೆಗಾಲಕ್ಕೆ ಭತ್ತ ಬೆಳೆಯಲು ನೀರು ಕೊಟ್ಟರೇ ಬೇಸಿಗೆಗೆ ತೊಂದರೆಯಾಗುತ್ತದೆ ಎಂದು ಹೇಳುತ್ತಿದ್ದಾರೆ..ಈ ನಡುವೆ ಕೆಲ ರೈತರು ಈಗಾಗಲೇ ಭತ್ತ ನಾಟಿ ಮಾಡಿದ್ದಾರೆ.ಕೆಲ ರೈತರು ಮಳೆಗಾಲದ ಭತ್ತಕ್ಕೆ ನೀರು ಕೊಡಿ ಎಂದರೆ, ಮತ್ತೆ ಕೆಲವರು ಬೇಸಿಗೆಯಲ್ಲಿ ತೋಟ ಉಳಿಸಿಕೊಳ್ಳಲು ನೀರು ಬೇಕು, ಈಗ ನೀರು ಸಂಗ್ರಹಿಸಿ ಬೇಸಿಗೆಯಲ್ಲಿ ಭತ್ತ, ತೋಟದ ಬೆಳೆಗಳಿಗೆ ನೀರು ಕೊಡಿ ಎನ್ನುತ್ತಿದ್ದಾರೆ. ಈ ಹಿಂದೆ ಹಲವು ಬಾರಿ ನಿರೀಕ್ಷೆಯಷ್ಟು ಮಳೆ ಬಾರದೆ, ಮಳೆಗಾಲದಲ್ಲಿ 'ಆನ್ ಆಂಡ್ ಆಫ್' ಪದ್ದತಿಯಲ್ಲಿ ಭತ್ತದ ಬೆಳೆದ ಉದಾಹರಣೆಗಳಿವೆ. ಕೆಲವೊಮ್ಮೆ ಆ.15ರೊಳಗೆ ಉತ್ತಮ ಮಳೆಯಾಗಿ ಜಲಾಶಯ ಭರ್ತಿಯಾದ ಇತಿಹಾಸವೂ ಇದೆ.
2023ರಲ್ಲಿ ಇದೇ ಸ್ಥಿತಿ
ಈಗ ಎದುರಾಗಿರುವ ಸ್ಥಿತಿಯೇ 2023ರಲ್ಲೂ ಇತ್ತು. ಆಗ ಮಳೆಗಾಲದ ಬೆಳೆಗೆ 100 ದಿನ ನೀರು ಹರಿಸುವುದಾಗಿ ಹೇಳಿದ ನೀರಾವರಿ ನಿಗಮ, ಆ.10 ರಿಂದ ನಾಲೆಗೆ ನೀರು ಹರಿಸಿತ್ತು. ಆಗ ಜಲಾಶಯದ ನೀರಿನ ಮಟ್ಟ 166.9 ಅಡಿ. ಆಗ ಒಟ್ಟು 89 ದಿನ ನೀರು ಹರಿಸಿದ್ದರು.
ಈ ನಡುವೆ ಆಗಸ್ಟ್ನಲ್ಲಿ ನಿರೀಕ್ಷಿತ ಮಳೆ ಬಾರದ ಕಾರಣ, ಮೊದಲ ಹಂತದಲ್ಲಿ 10 ದಿನ ನಂತರ ಮತ್ತೆ 7 ದಿನ ನೀರು ನಿಲ್ಲಿಸುವ 'ಆನ್ ಆಂಡ್ ಆಫ್' ಪದ್ಧತಿ ಜಾರಿಗೊಳಿಸಿದ್ದರು. 2023ರ ಅಗಸ್ಟ್ ತಿಂಗಳಲ್ಲಿ ವಾಡಿಕೆ ಮಳೆ ಬಾರದೆ, ಭದ್ರಾ ಜಲಾಶಯಕ್ಕೆ ಇತಿಹಾಸ ದಲ್ಲಿ ಅತ್ಯಂತ ಕನಿಷ್ಯ ಕೇವಲ 7 ಟಿಎಂಸಿ ನೀರು ಬಂದಿತ್ತು. ಆಗ ಭತ್ತದ ಬೆಳೆ ಕಾಳು ಕಟ್ಟುವ ಹಂತದಲ್ಲಿದ್ದಾಗ 7 ದಿನ ನೀರು ಬಂದ್ ಮಾಡಿದಾಗ, ಜಿಲ್ಲೆಯ ಅಚ್ಚುಕಟ್ಟಿನಲ್ಲಿ ಉತ್ತಮ ಮಳೆ ಸುರಿದು ಬೆಳೆ ಉಳಿಸಿತ್ತು. ಆಗ ಕ್ವಿಂಟಲ್ ಭತ್ತಕ್ಕೆ 3100 ರೂ. ದರ ಸಿಕ್ಕಿತ್ತು.
ತೋಟಗಳಿಗೆ ಸಂಕಷ್ಟ
2023ರ ಮಳೆಗಾಲದ ಬೆಳೆಗೆ ನೀರು ಹರಿಸಿದ್ದರಿಂದ, ಜಲಾಶಯದಲ್ಲಿ ನೀರಿನ ಕೊರತೆಯಾಗಿ, 2024ರ ಬೇಸಿಗೆಯಲ್ಲಿ ತೋಟದ ಬೆಳೆಗಳಿಗೂ ನೀರಿಲ್ಲದೆ ರೈತರು ತೊಂದರೆ ಅನುಭವಿಸಿದ್ದರು. 2024ರ ಜ.11ರಿಂದ ಎಡದಂಡೆ ನಾಲೆಗೆ ಹಾಗೂ ಜನವರಿ 16 ರಿಮನದ ಬಲದಂಡೆ ನಾಲೆಗೆ ಆನ್ ಆ್ಯಂಡ್ ಆಫ್ ಪದ್ದತ್ತಿಯಲ್ಲಿ ನೀರು ಹರಿಸಲಾಗಿತ್ತು.ಅಂದು ನಾಲೆಗೆ ನೀರಿನ ಪ್ರಮಾಣ ಡ್ಯಾಂ ನಲ್ಲಿ ನೀರಿನ ಪ್ರಮಾಣ 151 ಅಡಿ ಇತ್ತು.
2024ರ ಬೇಸಿಗೆಯಲ್ಲಿ ನೀರಿನ ಕೊರತೆಯಿಂದಾಗಿ, 12 ದಿನ ನಾಲೆಗೆ ನೀರು ಹರಿಸುವ 20 ದಿನ ಬಂದ್ ಮಾಡುವ ಅವೈಜ್ಞಾನಿಕ ವೇಳಾಪಟ್ಟಿಯಿಂದ ಕೊನೆ ಭಾಗದ ತೋಟಗಳು ಒಣಗಿದ್ದವು. ನೀರು ಹರಿಯುವ ದಿನಗಳು ಕಡಿಮೆ ಇದ್ದುದರಿಂದ ಎಲ್ಲ ಉಪ ನಾಲೆಗಳನ್ನೂ ಓಪನ್ ಮಾಡಿದ್ದು ನಾಲೆಗಳಲ್ಲಿ ನೀರು ತಳಮಟ್ಟದಲ್ಲಿ ಹರಿದು, ತೋಟಗಳಿಗೆ ನೀರು ಹಾಯಿಸಲು ಸಾಧ್ಯವಾಗದೆ, ರೈತರು ಹೈರಾಣಾಗಿದ್ದರು. 2023 ಹಾಗೂ 2026ರ ಆ.10ರ ದಿನಾಂಕಕ್ಕೆ ಸಾಕಷ್ಟು ಸಾಮ್ಯತೆ ಇದೆ. 2023ರಲ್ಲಿ ಆ.10ರಂದು ನಾಲೆಗೆ ನೀರು ಬಿಟ್ಟಾಗ ಜಲಾಶಯದಲ್ಲಿ 166.9 ಅಡಿ ನೀರು ಇತ್ತು. ಈ ವರ್ಷ ಆ.9ರಂದು ಜಲಾಶಯದ ನೀರಿನ ಮಟ್ಟ 169.10 ಅಡಿ ಇದೆ. ಅಂದಿಗಿಂತ ಇಂದು ನೀರಿನ ಮಟ್ಟ 3 ಅಡಿ ಹೆಚ್ಚಾಗಿದೆ.
2019ರಲ್ಲಿ ಏನಾಗಿತ್ತು.
2019ರಲ್ಲಿ ಜುಲೈ ಅಂತ್ಯದವರೆಗೆ ಮಳೆ ಬಾರದೆ, ರೈತರು ಬೆಳೆ ಕಳೆದುಕೊಂಡಿದ್ದರು. ಅ.5ರಂದು ಜಲಾಶಯದಲ್ಲಿ 147.6 ಅಡಿ ನೀರಿತ್ತು. ಒಂದು ವಾರ ಭರ್ಜರಿ ಮಳೆ ಸುರಿದ ಪರಿಣಾಮ ಆ.11ರಂದು ಡ್ಯಾಂ ನೀರಿನ ಮಟ್ಟ 177.3 ಅಡಿ ತಲುಪಿತ್ತು!. ಆದರೆ ಕೇವಲ 7 ದಿನಗಳಲ್ಲಿ 29.7 ಅಡಿ ನೀರು ಏರಿಕೆಯಾಗಿತ್ತು. 2020ರ ಆ.3ರಂದು 153.9 ಅಡಿ ಇದ್ದ ನೀರಿನ ಮಟ್ಟ ಕೇವಲ 11 ದಿನಗಳಲ್ಲಿ 177.1 ಅಡಿ ತಲುಪಿತ್ತು. ಈ ಎರಡೂ ವರ್ಷಗಳಲ್ಲಿ ಅಸಲೆ ಮಳೆಯಿಂದ ಭದ್ರಾ ಜಲಾಶಯ ಭರ್ತಿಯಾಗಿ ರೈತರು ನೆಮ್ಮದಿಯಿಂದ ಭತ್ತ ಬೆಳೆದಿದ್ದರು.
ಆ.17ರವರೆಗೆ ಅಸಲೆ ಮಳೆ
ಆ.17ರವರೆಗೆ ಅಸಲೆ ಮಳೆ ಇದ್ದು, ಇನ್ನು 9 ದಿನಗಳೊಳಗೆ ಉತ್ತಮ ಮಳೆ ಬಂದರೆ ಮಾತ್ರ ಡ್ಯಾಂ ಭರ್ತಿಯಾಗಬಲ್ಲದು. ಆದರೆ ಈ ಸಲ ಎಲ್ನೋ ಪರಿಣಾಮ ಮಳೆ ಕೊರತೆಯಾಗಿದೆ. ಅಸಲೆ ಮಳೆ ಗೆಲ್ಲುತ್ತೋ ಅಥವಾ ಎಲ್ನೋ ಗೆಲ್ಲುತ್ತದೋ ಕಾದು ನೋಡಬೇಕಿದೆ. ಪ್ರಕೃತಿ ರಹಸ್ಯ ನಿಗೂಢವಾಗಿದೆ. ಇನ್ನು ಒಂದು ವಾರದಲ್ಲಿನ ಮಳೆ ರೈತರ ಭವಿಷ್ಯ ನಿರ್ಧರಿಸಲಿದೆ.
ನೀರಿನ ಲೆಕ್ಕಾಚಾರ
ಭದ್ರಾ ಜಲಾಶಯ 186 ಅಡಿ ಹಾಗೂ 71.535 ಟಿಎಂಸಿ ಗರಿಷ್ಠ ಸಾಮರ್ಥ್ಯ ಹೊಂದಿದ್ದು, ಆ.9ಕ್ಕೆ ಜಲಾಶಯದಲ್ಲಿ 52.713 ಟಿಎಂಸಿ ನೀರಿನ ಸಂಗ್ರಹವಿದೆ. ಡೆಡ್ ಸ್ಟೋರೇಜ್ 13.832 ಟಿಎಂಸಿ, ಕುಡಿಯುವ ನೀರಿಗೆ 8.50 ಟಿಎಂಸಿ (ಹೆಚ್ಚುವರಿ 2 ಟಿಎಂಸಿ), ಜಲಸಸ್ಯಗಳಿಗೆ 2 ಟಿಎಂಸಿ, ಆವಿಯಾಗುವುದು 4 ಟಿಎಂಸಿ, ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಮಳೆಗಾಲದಲ್ಲಿ ಸಂಗ್ರಹ ಮಾಡಬೇಕಾದದ್ದು ಟಿಎಂಸಿ ಸೇರಿ ಒಟ್ಟು 35 ಟಿಎಂಸಿ ಕಾಯ್ದಿರಿಸಬೇಕು. ಪ್ರಸ್ತುತ ಈಗ 52.713 ಟಿಎಂಸಿಯಲ್ಲಿ 35 ಟಿಎಂಸಿ ಕಳೆದರೆ, ನೀರಾವರಿಗೆ ಬಳಕೆಗೆ 17 ಟಿಎಂಸಿ ಲಭ್ಯ. ಮಳೆಗಾಲದ ಬೆಳೆಗೆ 32 ಟಿಎಂಸಿ ಬೇಕಿದ್ದು, 15 ಟಿಎಂಸಿ ಕೊರತೆಯಾಗುತ್ತದೆ ಎನ್ನುತ್ತಾರೆ ನೀರಾವರಿ ನಿಗಮದ ಅಧಿಕಾರಿಗಳು. ಒಟ್ಟಾರೆ ಡ್ಯಾಂ ತುಂಬಿದರೆ ಮಾತ್ರ ರೈತರು ಒಂದಿಷ್ಟು ಉಸಿರಾಡಬಹುದು.

ನಿಮ್ಮ ಅಭಿಪ್ರಾಯ ತಿಳಿಸಿ