ತುಮಕೂರು : ಇಷ್ಟವಿಲ್ಲದ ಊಟ.. ಇಷ್ಟವಿಲ್ಲದ ಸಂಬಂಧ ಜೀರ್ಣವಾಗಲು ಸಾಧ್ಯವೇ.. ಇನ್ನು ಹಸಿರು ಚಪ್ಪರ ಒಣಗುವ ಮುನ್ನವೇ, ಕೈಯಲ್ಲಿದ್ದ ಮೈಹಂದಿ ಬಣ್ಣ ಮಾಸುವ ಮುನ್ನವೇ ನವದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ಸಂಭವಿಸಿದೆ. ಮದುವೆಯಾಗಿ ಕೇವಲ ನಾಲ್ಕೇ ತಿಂಗಳಿಗೆ ನವವಿವಾಹಿತ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಹೌದು, ಬದುಕಿ ಬಾಳಬೇಕಾದ ಜೋಡಿ ವಿಧಿಯ ಆಟಕ್ಕೆ ಬಲಿಯಾಗಿದೆ. #ತುಮಕೂರು ಜಿಲ್ಲೆಯ #ಶಿರಾ ತಾಲ್ಲೂಕಿನ ಹನುಮನಹಳ್ಳಿಯಲ್ಲಿ ಇಂದು ಮುಂಜಾನೆ ಈ ಘೋರ ದುರಂತ ಸಂಭವಿಸಿದೆ. 20 ವರ್ಷದ ಶರಣ್ಯ ಹಾಗೂ 28 ವರ್ಷದ ಗಿರೀಶ್ ಆತ್ಮಹತ್ಯೆಗೆ ಶರಣಾದ ದುರ್ದೈವಿಗಳು. ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೇ ಇವರಿಬ್ಬರ ವಿವಾಹ ಅತ್ಯಂತ ಸಡಗರದಿಂದ ನೆರವೇರಿತ್ತು. ಹೊಸ ಜೀವನದ ಕನಸು ಕಾಣುತ್ತಿದ್ದ ದಂಪತಿ, ಈಗ ಹೆ*ಣವಾಗಿ ಬಿದ್ದಿರುವುದನ್ನು ಕಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಮನೆಯಲ್ಲಿ ಯಾರೂ ಇಲ್ಲದ ಸಂದರ್ಭವನ್ನು ನೋಡಿಕೊಂಡು ಪತ್ನಿ ಶರಣ್ಯ ಮೊದಲು ನೇಣಿಗೆ ಶರಣಾಗಿದ್ದಾರೆ. ಕೆಲಸ ಮುಗಿಸಿ ಮನೆಗೆ ಬಂದ ಪತಿ ಗಿರೀಶ್ಗೆ ಪತ್ನಿಯ ಶವ ಕಂಡು ತೀವ್ರ ಆಘಾತವಾಗಿದೆ. ಪತ್ನಿಯ ಅಗಲಿಕೆಯನ್ನು ತಡೆದುಕೊಳ್ಳಲಾರದ ಗಿರೀಶ್, ತಕ್ಷಣವೇ ಗ್ರಾಮದ ಹೊರವಲಯದ ಹೊಲಕ್ಕೆ ಓಡಿ ಹೋಗಿ ಅಲ್ಲಿನ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಒಂದೇ ದಿನ, ಕೆಲವೇ ಗಂಟೆಗಳ ಅಂತರದಲ್ಲಿ ಇಬ್ಬರೂ ಸಾವಿನ ಹಾದಿ ಹಿಡಿದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅಲ್ಲದೆ ಶರಣ್ಯಗೆ ಇಷ್ಟ ಇಲ್ಲದಿದ್ರೂ ಮಾವ ಗಿರೀಶ್ ಜೊತೆ ಮದುವೆ ಮಾಡಲಾಗಿತ್ತು ಎನ್ನಲಾಗಿದೆ.


ನಿಮ್ಮ ಅಭಿಪ್ರಾಯ ತಿಳಿಸಿ