ಬೆಂಗಳೂರು : ರಾಜ್ಯ ರಾಜಕಾರಣದ ಧ್ರುವತಾರೆ, ಮಾಜಿ ಪ್ರಧಾನಿ ಶ್ರೀ ಎಚ್.ಡಿ. ದೇವೇಗೌಡರ ಧರ್ಮಪತ್ನಿ ಶ್ರೀಮತಿ ಚೆನ್ನಮ್ಮ ದೇವೇಗೌಡ (89) ಅವರು ವಿಧಿವಶರಾಗಿದ್ದಾರೆ. ಆ ಮೂಲಕ ಹಾಸನದ ಮಣ್ಣಿನ ಹೆಮ್ಮೆಯ ಕುಟುಂಬದಲ್ಲಿ, ಜೆಡಿಎಸ್ ಕಾರ್ಯಕರ್ತರಲ್ಲಿ ಹಾಗೂ ಇಡೀ ನಾಡಿನಲ್ಲಿ ಸೂತಕದ ಛಾಯೆ ಆವರಿಸಿದೆ.
ದೊಡ್ಡಗೌಡರ ದಶಕಗಳ ಸುದೀರ್ಘ, ಹೋರಾಟದ ರಾಜಕೀಯ ಬದುಕಿಗೆ ಕೇವಲ ಪತ್ನಿಯಾಗಿ ಮಾತ್ರವಲ್ಲದೆ, ಇಡೀ ಕುಟುಂಬವನ್ನು ಮುನ್ನಡೆಸಿದ ಮಹಾಶಕ್ತಿಯಾಗಿ ಚೆನ್ನಮ್ಮನವರು ನೆರಳಾಗಿದ್ದರು. ಅವರ ಅಗಲಿಕೆ ಇಡೀ ಗೌಡರ ಕುಟುಂಬಕ್ಕೆ ತುಂಬಲಾರದ ನಷ್ಟ.
ಸಂಸಾರ ನಿಭಾಯಿಸಿದ ಗಟ್ಟಿಗಿತ್ತಿ.. ಆದರ್ಶ ಗೃಹಿಣಿ:
ಹೊಳೆನರಸೀಪುರ ತಾಲ್ಲೂಕಿನ ಮುತ್ತಿಗೆ ಹಿರೇಹಳ್ಳಿ ಗ್ರಾಮದ (ತಂದೆ ದೇವೇಗೌಡ, ತಾಯಿ ಕಾಳಮ್ಮ) ಹೆಣ್ಣುಮಗಳಾದ ಚೆನ್ನಮ್ಮನವರು, ಅಂದಿನ ಕಾಲದಲ್ಲೇ ಎಸ್ಎಸ್ಎಲ್ಸಿವರೆಗೆ ಶಿಕ್ಷಣ ಪಡೆದಿದ್ದರು. ಹಿರಿಯ ಮಗಳಾಗಿ ನಾಲ್ವರು ತಮ್ಮಂದಿರು ಹಾಗೂ ನಾಲ್ವರು ತಂಗಿಯರಿಗೆ ತಾಯಿಯಂತೆ ಆಸರೆಯಾಗಿದ್ದ ಇವರು, 1954ರ ಮೇ 25ರಂದು ದೇವೇಗೌಡರ ಕೈಹಿಡಿದರು.
ಅಂದಿನಿಂದ ಸದಾ ಕಾಲ ಜನಸೇವೆ, ರಾಜಕೀಯ ಹೋರಾಟ, ಜೈಲು ವಾಸ ಎಂದು ಬ್ಯುಸಿಯಾಗಿದ್ದ ದೇವೇಗೌಡರಿಗೆ ಕುಟುಂಬದ ಯಾವುದೇ ಹೊರೆ ಬೀಳದಂತೆ ಇಡೀ ಸಂಸಾರವನ್ನು ನಿಭಾಯಿಸಿದ ಗಟ್ಟಿಗಿತ್ತಿ ಈಕೆ. ಎಚ್.ಡಿ. ರೇವಣ್ಣ, ಎಚ್.ಡಿ. ಬಾಲಕೃಷ್ಣಗೌಡ, ಎಚ್.ಡಿ. ರಮೇಶ್ ಗೌಡ, ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ನಾಲ್ವರು ಗಂಡು ಮಕ್ಕಳು ಹಾಗೂ ಶೈಲಜಾ ಮತ್ತು ಅನುಸೂಯ ಎಂಬ ಇಬ್ಬರು ಹೆಣ್ಣುಮಕ್ಕಳನ್ನು ಶಿಸ್ತಿನಿಂದ ಸಲಹಿ, ಉನ್ನತ ಶಿಕ್ಷಣ ಕೊಡಿಸಿ, ಆದರ್ಶ ತಾಯಿಯಾಗಿ ನೆರವಾದರು.
ಸವಾಲುಗಳನ್ನು ಮೆಟ್ಟಿನಿಂತ ಧೀರೆ
2001ರ ಫೆಬ್ರವರಿಯಲ್ಲಿ ಹರದನಹಳ್ಳಿಯ ದೇವಾಲಯದ ಪೂಜೆ ಮುಗಿಸಿ ವಾಪಸ್ ಬರುವಾಗ ಇವರ ಮೇಲೆ ಹಾಗೂ ರೇವಣ್ಣನವರ ಪತ್ನಿ ಭವಾನಿ ಅವರ ಮೇಲೆ ಆಸಿಡ್ ದಾಳಿಯಾಗಿತ್ತು. ಆ ಘೋರ ಘಟನೆಯಿಂದ ಗಂಭೀರವಾಗಿ ಗಾಯಗೊಂಡಿದ್ದರೂ, ಧೃತಿಗೆಡದೆ ಚಿಕಿತ್ಸೆ ಪಡೆದು ಚೇತರಿಸಿಕೊಂಡ ಧೀಮಂತ ಮಹಿಳೆ ಇವರು.
ದೇಶದ ಅತ್ಯುನ್ನತ ಪ್ರಧಾನಿ ಹುದ್ದೆಗೇರಿದರೂ ದೇವೇಗೌಡರು ಸದಾ ಮಣ್ಣಿನ ಮಗನಾಗಿಯೇ ಉಳಿಯಲು ಚೆನ್ನಮ್ಮನವರ ಸರಳತೆ ಮತ್ತು ಧಾರ್ಮಿಕ ನಿಷ್ಠೆಯೇ ಕಾರಣವಾಗಿತ್ತು. ದೊಡ್ಡಗೌಡರ ಬೆನ್ನೆಲುಬಾಗಿದ್ದ ಆ ತಾಯಿ ಇವತ್ತು ನಮ್ಮನ್ನಗಲಿದ್ದಾರೆ.
ಮಾತೃಶ್ರೀ ಚೆನ್ನಮ್ಮ ಅವರ ಆತ್ಮಕ್ಕೆ ಭಗವಂತನು ಸದ್ಗತಿಯನ್ನು ಕರುಣಿಸಲಿ. ಹೆಮ್ಮರ ತರಹ ಇಡೀ ಕುಟುಂಬವನ್ನು ಕಾಯುತ್ತಿದ್ದ ಗೌಡರಿಗೆ ಹಾಗೂ ಅವರ ಇಡೀ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಆ ದೇವರು ನೀಡಲಿ ಎಂದು ಪ್ರಾರ್ಥಿಸೋಣ.

ನಿಮ್ಮ ಅಭಿಪ್ರಾಯ ತಿಳಿಸಿ