![]() |
ಶಿವಮೊಗ್ಗ : ಸೋಷಿಯಲ್ ಮೀಡಿಯಾ ಜಗತ್ತಿನಲ್ಲಿ ಕಾಣುವ ಮದುವೆ-ವಿಚ್ಛೇದನದ ಸುದ್ದಿಗಳು ಸಾಮಾನ್ಯವಾಗಿ ಕಣ್ಣೀರು, ಕೋರ್ಟ್ ಕಟಗಟೆ, ಪರಸ್ಪರ ಆರೋಪಗಳೊಂದಿಗೆ ಕೊನೆಗೊಳ್ಳುತ್ತವೆ. ಆದರೆ ಇಲ್ಲೊಬ್ಬ ಪ್ರಸಿದ್ಧ ಇನ್ಸ್ಟಾಗ್ರಾಮ್ ಕಂಟೆಂಟ್ ಕ್ರಿಯೇಟರ್ ಹಾಗೂ ಟ್ಯಾಟೂ ಆರ್ಟಿಸ್ಟ್, ತಮ್ಮ ಡಿವೋರ್ಸ್ ಅನ್ನು ಅತ್ಯಂತ ವಿಭಿನ್ನವಾಗಿ, ನಗುನಗುತ್ತಾ ಇಡೀ ಜಗತ್ತಿಗೆ ಪರಿಚಯಿಸಿ ನೆಟ್ಟಿಗರನ್ನು ಅಚ್ಚರಿಗೀಡು ಮಾಡಿದ್ದಾರೆ.
ಅವರೇ ಬರೋಬ್ಬರಿ 1 ಮಿಲಿಯನ್ (10 ಲಕ್ಷ) ಫಾಲೋವರ್ಸ್ ಹೊಂದಿರುವ ಇನ್ಸ್ಟಾಗ್ರಾಮ್ ಸ್ಟಾರ್ 'ಟ್ಯಾಟೂ ಘೋಸ್ಟ್' (The Tattoo Ghost).
ಇಷ್ಟು ದಿನ ಸಸ್ಪೆನ್ಸ್ ಆಗಿದ್ದ ಹೆಂಡತಿಯನ್ನು ಪರಿಚಯಿಸಿದ್ದು ಕೋರ್ಟ್ ಮುಂಭಾಗ!
ಮೈತುಂಬಾ ಹಚ್ಚೆ, ದಟ್ಟವಾದ ಗಡ್ಡ ಹಾಗೂ ಉದ್ದನೆಯ ಕೂದಲಿನ ವಿಭಿನ್ನ ಲುಕ್ನಿಂದಲೇ ಫೇಮಸ್ ಆಗಿರುವ ಟ್ಯಾಟೂ ಘೋಸ್ಟ್ ಅವರ ವೈಯಕ್ತಿಕ ಜೀವನದ ಬಗ್ಗೆ ನೆಟ್ಟಿಗರಲ್ಲಿ ಸದಾ ಕುತೂಹಲವಿತ್ತು. "ನಿಮಗೆ ಮದುವೆ ಆಗಿದೆಯಾ? ನಿಮ್ಮ ಹೆಂಡತಿ ಯಾರು?" ಎಂಬ ಪ್ರಶ್ನೆಗಳಿಗೆ ಈ ಹಿಂದೆ ಅವರು, "ಮದುವೆಯಾಗಿದೆ, ಆದರೆ ಕಾರಣಾಂತರಗಳಿಂದ ದೂರವಿದ್ದೇವೆ" ಎಂದು ಮಾತ್ರ ಉತ್ತರಿಸುತ್ತಿದ್ದರು.
ಆದರೆ ಇದೀಗ ಬರೋಬ್ಬರಿ 5 ವರ್ಷಗಳ ಸುದೀರ್ಘ ಅಂತರದ ನಂತರ ತಮ್ಮ ಹೆಂಡತಿಯನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಆದರೆ ಅದು ಯಾವುದೇ ಸಂಭ್ರಮದ ವೇದಿಕೆಯಲ್ಲಲ್ಲ, ಬದಲಿಗೆ ಶಿವಮೊಗ್ಗದ ಫ್ಯಾಮಿಲಿ ಕೋರ್ಟ್ ಆವರಣದಲ್ಲಿ! ತಾವಿಬ್ಬರೂ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆಯುತ್ತಿರುವ ಇಡೀ ಪ್ರಕ್ರಿಯೆಯನ್ನೇ ಇವರು ವಿಡಿಯೋ ಮಾಡಿ ರೀಲ್ಸ್ ರೂಪದಲ್ಲಿ ಹಂಚಿಕೊಂಡಿದ್ದಾರೆ.
"ಗಂಡ-ಹೆಂಡತಿಯಾಗಿ ಜಗಳವಾಡುವುದಕ್ಕಿಂತ, ಸ್ನೇಹಿತರಾಗಿ ದೂರವಿರುವುದೇ ಲೇಸು!"
ಶಿವಮೊಗ್ಗ ಕೋರ್ಟ್ ಮುಂದೆ ನಿಂತು ಮಾತನಾಡುವ ಟ್ಯಾಟೂ ಘೋಸ್ಟ್, "ಇವತ್ತು ನನ್ನ ಜೀವನದಲ್ಲಿ ಮರೆಯೋಕಾಗದೇ ಇರೋ ದಿನ. ಐದು ವರ್ಷದ ನಂತರ ನಾನು ಇವರನ್ನ ಭೇಟಿಯಾಗುತ್ತಿದ್ದೇನೆ," ಎನ್ನುತ್ತಾ ಪಕ್ಕದಲ್ಲಿದ್ದ ಮಹಿಳೆಯ ಕಡೆ ಕ್ಯಾಮೆರಾ ತಿರುಗಿಸುತ್ತಾರೆ. ಆ ಮಹಿಳೆ ಕೂಡ ನಗುಮುಖದಿಂದಲೇ "ನಾನು ಇವರ ಹೆಂಡತಿ" ಎಂದು ಸಮಾಜಕ್ಕೆ ಪರಿಚಯವಾಗುತ್ತಾರೆ.
ತಾವು ವಿಚ್ಛೇದನ ಪಡೆಯುತ್ತಿರುವ ಅಸಲಿ ಕಾರಣ
"ನಾವು ಕಾರಣಾಂತರಗಳಿಂದ ಸ್ನೇಹಿತರಾಗಿ ಉಳಿದುಕೊಂಡಿದ್ದೇವೆ. ಕೆಲವೊಂದು ಸನ್ನಿವೇಶಗಳು ಹೇಗಿರುತ್ತವೆ ಎಂದರೆ, ಗಂಡ-ಹೆಂಡತಿಯಾಗಿ ಬಲವಂತವಾಗಿ ಒಟ್ಟಿಗೆ ಬದುಕಿ ಪ್ರತಿದಿನ ಜಗಳವಾಡುವ ಬದಲು, ಫ್ರೆಂಡ್ಶಿಪ್ನಲ್ಲಿ ಇದ್ದು ದೂರ ಇರೋದೇ ಒಳ್ಳೆಯದು. ಅದಕ್ಕೇ ಇಬ್ಬರೂ ಒಪ್ಪಿ ಡಿವೋರ್ಸ್ ತಗೋತಾ ಇದ್ದೀವಿ," ಎಂದು ಅತ್ಯಂತ ಪ್ರಬುದ್ಧತೆಯಿಂದ ಹೇಳಿದ್ದಾರೆ.
ಕೋರ್ಟ್ನಲ್ಲಿ ಸಹಿ, ಒಟ್ಟಿಗೆ ಚಹಾ.. ವೈರಲ್ ವಿಡಿಯೋದಲ್ಲಿ ಏನಿದೆ?
ವಿಚ್ಛೇದನದ ಪ್ರಕ್ರಿಯೆ ನಡೆಯುವಾಗ ಇಬ್ಬರಲ್ಲೂ ಯಾವುದೇ ದ್ವೇಷ ಅಥವಾ ಬೇಸರ ಕಾಣಿಸಲಿಲ್ಲ. ಹಿನ್ನೆಲೆ ಸಂಗೀತದೊಂದಿಗೆ ಇಬ್ಬರೂ ಶಿವಮೊಗ್ಗ ಕೋರ್ಟ್ನೊಳಗೆ ಪ್ರವೇಶಿಸಿ, ವಕೀಲರ ಸಮ್ಮುಖದಲ್ಲಿ ಕಾನೂನಾತ್ಮಕ ಕಾಗದ ಪತ್ರಗಳಿಗೆ ಸಹಿ ಹಾಕುತ್ತಾರೆ. ಸಹಿ ಮುಗಿದ ಬಳಿಕ ಇಬ್ಬರೂ ಒಟ್ಟಿಗೆ ನಿಂತು ನಗುತ್ತಾ ಪೋಸ್ ನೀಡಿದ್ದಾರೆ.ಅಷ್ಟೇ ಅಲ್ಲದೆ, ಕೋರ್ಟ್ನಿಂದ ಹೊರಬಂದ ಮೇಲೆ ಇಬ್ಬರೂ ಆತ್ಮೀಯವಾಗಿ ಕುಳಿತು ಮಾತನಾಡಿದ್ದಾರೆ, ದಾರಿಯಲ್ಲಿ ಸಿಕ್ಕ ಅಭಿಮಾನಿಗಳೊಂದಿಗೆ ಸೆಲ್ಫಿ ತೆಗೆಸಿಕೊಂಡಿದ್ದಾರೆ ಮತ್ತು ಒಟ್ಟಿಗೆ ಟೀ ಕುಡಿಯುತ್ತಾ ಕೊನೆಯ ಕ್ಷಣಗಳನ್ನು ಸೌಹಾರ್ದಯುತವಾಗಿ ಕಳೆದಿದ್ದಾರೆ.
ಕಣ್ಣೀರ ವಿದಾಯವಲ್ಲ, ಶುಭ ಹಾರೈಕೆಯ ವಿದಾಯ!
ವಿಡಿಯೋದ ಕೊನೆಯಲ್ಲಿ ಪತ್ನಿ ಆಟೋ ಹತ್ತಿ ಹೊರಡುವಾಗ ಇಬ್ಬರ ನಡುವೆ ನಡೆದ ಮಾತುಕತೆ ನೆಟ್ಟಿಗರ ಹೃದಯ ಗೆದ್ದಿದೆ:
ಟ್ಯಾಟೂ ಘೋಸ್ಟ್: "ಬೆಸ್ಟ್ ಆಫ್ ಲಕ್ ನಿನ್ನ ಫ್ಯೂಚರ್ ಗೆ."
ಪತ್ನಿ (ನಗುತ್ತಾ): "ನಿಮ್ಮ ಫ್ಯೂಚರ್ ಚೆನ್ನಾಗಿರ್ಲಿ. ಚೆನ್ನಾಗಿರುತ್ತೆ, ಅದು ನನಗ್ ಗೊತ್ತು. ಖುಷಿಯಾಗಿರಿ."
ಟ್ಯಾಟೂ ಘೋಸ್ಟ್: "ನೀನು ಅಷ್ಟೇ ಖುಷಿಯಾಗಿರು."
ಹೀಗೆ ಒಬ್ಬರಿಗೊಬ್ಬರು ಕೈಬೀಸಿ, ನಗುತ್ತಲೇ ತಮ್ಮ ದಾಂಪತ್ಯ ಜೀವನಕ್ಕೆ ಪೂರ್ಣವಿರಾಮ ಇಟ್ಟಿದ್ದಾರೆ. ಸಂಬಂಧವೊಂದು ಮುರಿದುಬೀಳುವಾಗಲೂ ಅಲ್ಲಿ ದ್ವೇಷದ ಬದಲು ಗೌರವ ಹಾಗೂ ಪ್ರೀತಿ ಇರಬಹುದು ಎಂಬುದನ್ನು ತೋರಿಸಿಕೊಟ್ಟ ಈ ವಿಡಿಯೋ ಸದ್ಯ ಇಂಟರ್ನೆಟ್ನಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಇವರ ಪ್ರಬುದ್ಧ ನಡೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.






ನಿಮ್ಮ ಅಭಿಪ್ರಾಯ ತಿಳಿಸಿ