ಶಿವಮೊಗ್ಗ : 2018ರಲ್ಲಿ ಶಿವಮೊಗ್ಗದಲ್ಲಿ ಬೆಳಕಿಗೆ ಬಂದಿದ್ದ ಖೋಟಾ ನೋಟು ಚಲಾವಣೆ ಪ್ರಕರಣದಲ್ಲಿ ಸುಮಾರು ಎಂಟು ವರ್ಷಗಳ ವಿಚಾರಣೆ ಬಳಿಕ ನ್ಯಾಯಾಲಯ ನಾಲ್ವರು ಆರೋಪಿಗಳನ್ನು ದೋಷಿಗಳೆಂದು ತೀರ್ಪು ನೀಡಿ, ತಲಾ 3 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹52,000 ದಂಡ ವಿಧಿಸಿದೆ.
2018ರ ಫೆಬ್ರವರಿ 7ರಂದು ಅಂದಿನ ತುಂಗಾನಗರ ಪೊಲೀಸ್ ಠಾಣೆ ಪಿಐ ಆರ್.ವಿ. ಗಂಗಾಧರಪ್ಪ ಅವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ, ನೇತಾಜಿ ಸರ್ಕಲ್ನಿಂದ ಅನುಪಿನಕಟ್ಟೆ ಕಡೆ ಬೈಕ್ನಲ್ಲಿ ಖೋಟಾ ನೋಟುಗಳನ್ನು ಸಾಗಿಸುತ್ತಿದ್ದ ಟಿಪ್ಪುನಗರದ ಅಮ್ಜದ್ ಪಾಷಾ (39) ಮತ್ತು ಮೌಸಿನ್ ಖಾನ್ (33) ಅವರನ್ನು ಗೋಪಾಳ ಖಾಸಗಿ ಬಸ್ ನಿಲ್ದಾಣದ ಸಮೀಪ ಸಿಬ್ಬಂದಿ ಹಾಗೂ ಪಂಚರ ಸಮ್ಮುಖದಲ್ಲಿ ಬಂಧಿಸಲಾಗಿತ್ತು.
ತಪಾಸಣೆಯಲ್ಲಿ ಅಮ್ಜದ್ ಪಾಷಾ ಬಳಿಯಿಂದ ₹500 ಮುಖಬೆಲೆಯ 95 ಖೋಟಾ ನೋಟುಗಳು ಹಾಗೂ ಮೌಸಿನ್ ಖಾನ್ ಬಳಿಯಿಂದ ₹500 ಮುಖಬೆಲೆಯ 167 ಖೋಟಾ ನೋಟುಗಳು ವಶಪಡಿಸಿಕೊಳ್ಳಲಾಗಿತ್ತು.
ತನಿಖೆ ವೇಳೆ, ಆರೋಪಿಗಳಾದ ತೌಸಿಫ್ ಮತ್ತು ಸೈಯದ್ ಇರ್ಪಾನ್ ಅವರೊಂದಿಗೆ ಸೇರಿ ಪಶ್ಚಿಮ ಬಂಗಾಳದಿಂದ ಸುಮಾರು ₹2 ಲಕ್ಷ ಮುಖಬೆಲೆಯ ಖೋಟಾ ನೋಟುಗಳನ್ನು ₹70 ಸಾವಿರ ಅಸಲು ಹಣ ನೀಡಿ ಖರೀದಿಸಿ, ಶಿವಮೊಗ್ಗ, ಭದ್ರಾವತಿ ಸೇರಿದಂತೆ ವಿವಿಧೆಡೆ ಚಲಾವಣೆ ಮಾಡಿರುವುದು ಬೆಳಕಿಗೆ ಬಂದಿತ್ತು.
ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 248/2018ರಡಿ ಐಪಿಸಿ ಕಲಂ 489A, 489B, 489C, 420 ಹಾಗೂ 34 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ತನಿಖೆಯನ್ನು ಅಂದಿನ ಡಿಸಿಐಬಿ ಪಿಐ ಆರ್.ವಿ. ಗಂಗಾಧರಪ್ಪ ನಡೆಸಿದ್ದರು.
ಪ್ರಕರಣದ ವಿಚಾರಣೆಯನ್ನು ಶಿವಮೊಗ್ಗದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಡೆಸಿತು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಶ್ರೀಮತಿ ಮಮತಾ ಬಿ.ಎಸ್. ವಾದ ಮಂಡಿಸಿದ್ದರು.
ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಧೀಶರಾದ ಶ್ರೀ ಯಶವಂತ್ ಕುಮಾರ್ ಅವರು ಜುಲೈ 14, 2026ರಂದು ನಾಲ್ವರು ಆರೋಪಿಗಳಿಗೆ 3 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹52,000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ.


ನಿಮ್ಮ ಅಭಿಪ್ರಾಯ ತಿಳಿಸಿ